Friday, May 10, 2024
Homeಇತರಪ್ರಧಾನಿ ನರೇಂದ್ರ ಮೋದಿ ನಿಮ್ಮೊ ಸೇನಾ ನೆಲೆಗೇ ಯಾಕೆ ಭೇಟಿ ನೀಡಿದ್ರು?

ಪ್ರಧಾನಿ ನರೇಂದ್ರ ಮೋದಿ ನಿಮ್ಮೊ ಸೇನಾ ನೆಲೆಗೇ ಯಾಕೆ ಭೇಟಿ ನೀಡಿದ್ರು?

spot_img
- Advertisement -
- Advertisement -

ನವದೆಹಲಿ: ಚೀನಾ ಗಡಿ ತಂಟೆ ತಕರಾರಿನ ನಡುವೆಯೇ ಪ್ರಧಾನಿ ಮೋದಿ ಲೇಹ್‍ ನ ನಿಮ್ಮೊ ಸೇನಾ ಶಿಬಿರಕ್ಕೆ ಭೇಟಿ ನೀಡಿರುವುದು ಜಾಗತಿಕವಾಗಿ ಗಮನ ಸೆಳೆದಿದೆ. ದೇಶದಲ್ಲೂ ಪ್ರಧಾನಿ ನಡೆಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿವೆ.  ಸೈನಿಕರ ಮನೋಸ್ಥೈರ್ಯ ಹೆಚ್ಚಿಸಿದ ಮೋದಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಪ್ರಧಾನಿ ತಮ್ಮ ಭೇಟಿಗಾಗಿ ಈ ನಿಮ್ಮೊ ಪ್ರದೇಶವನ್ನೇ ಏಕೆ ಆಯ್ದುಕೊಂಡರು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ತೀರಾ ಆಯಕಟ್ಟಿನ ಸ್ಥಾನದಲ್ಲಿರುವ ನಿಮ್ಮೊ ಫಾರ್ವಡ್ ಪೋಸ್ಟ್, ಭಾರತದ ಪ್ರಮುಖ ಸೇನಾ ನೆಲೆಗಳಲ್ಲಿ ಒಂದಾಗಿದೆ. ಇಲ್ಲಿಯ ಭೌಗೋಳಿಕ ವಿನ್ಯಾಸ ಹೇಗಿದೆ ಎಂದರೆ ಇಲ್ಲಿಂದ ಪಾಕ್ ಹಾಗೂ ಚೀನಿ ಸೈನಿಕರ ಆಟಾಟೋಪಗಳನ್ನು ನಿಯಂತ್ರಿಸಬಹುದು. ಭಾರತದ ಸೇನಾ ತಂತ್ರಗಾರಿಕೆಯ ವಿಚಾರದಲ್ಲಿ ನಿಮ್ಮೊ ಅತ್ಯಂತ ಪ್ರಮುಖ ಸೇನಾ ನೆಲೆಯಾಗಿದೆ.

ಬೇಸಿಗೆಯಲ್ಲಿ ಕೆಂಡ – ಚಳಿಗಾಲದಲ್ಲಿ ಹೆಪ್ಪುಗಟ್ಟುವ ಶೀತ..!

1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಭೂಮಿಯ ಸಾಲಿನಲ್ಲಿಯೇ ಬರುವ ನಿಮ್ಮೊ ಸೇನಾ ನೆಲೆ. ಪಾಕಿಸ್ತಾನದೊಂದಿಗಿನ ಗಡಿ ನಿಯಂತ್ರಣ ರೇಖೆ ಹಾಗೂ ಚೀನಾದೊಂದಿಗಿನ ವಾಸ್ತವ ಗಡಿ ರೇಖೆಗೆ ಸಮಾನ ಅಂತರದಲ್ಲಿದೆ. ಹೀಗಾಗಿ ಇದು ಸೇನಾ ವಲಯದಲ್ಲಿ ಪ್ರಮುಖ ನೆಲೆಯಾಗಿ ಗುರುತಿಸಿಕೊಂಡಿದೆ. ಲೇಹ್ ನಿಂದ 35 ಕಿಲೋಮೀಟರ್ ದೂರದಲ್ಲಿರುವ ನಿಮ್ಮೊ ಹವಾಗುಣ ಅತ್ಯಂತ ಕ್ಲಿಷ್ಟಕರವಾಗಿರುತ್ತದೆ. ಬೇಸಿಗೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‍ ವರೆಗೂ ತಾಪಮಾನ ವಿದ್ದರೆ, ಚಳಿಗಾಲದಲ್ಲಿ ಮೈನಸ್ 29 ಡಿಗ್ರಿಯಷ್ಟು ತಾಪಮಾನ ಪಾತಾಳಕ್ಕಿಳಿದಿರುತ್ತದೆ. ಹೀಗಾಗಿ ಇಲ್ಲಿ ಜನವಸತಿ ಕಡಿಮೆ.

ಎಲ್ಲಿ ನೋಡಿದರಲ್ಲಿ ಗಿಡಮರಗಳಿಲ್ಲದ ಬೋಳು ಪರ್ವತಗಳೇ ಕಾಣ ಸಿಗುತ್ತವೆ. ಅಲ್ಲದೆ ಈ ಪರ್ವತಗಳು ಅಷ್ಟೇ ದುರ್ಗಮ ಕೂಡ. ಹೀಗಾಗಿ ಇವುಗಳನ್ನು ಏರುವುದು ಕಷ್ಟಸಾಧ್ಯ. ಸಮುದ್ರ ಮಟ್ಟದಿಂದ 11 ಸಾವಿರ ಅಡಿ ಎತ್ತರದಲ್ಲಿರುವ ನಿಮ್ಮೊ ಪ್ರದೇಶ ಜಗತ್ತಿನ ಅತಿ ಎತ್ತರದ ಯುದ್ಧ ನೆಲೆಗಳಲ್ಲಿ ಒಂದಾಗಿದೆ.

ಇನ್ನು ಈ ಪ್ರದೇಶದ ವಿಶೇಷತೆ ಎಂದರೆ ನಿಮ್ಮೊ ಪ್ರದೇಶದಿಂದ ಕೇವಲ 7.5 ಕೀ.ಮೀ ದೂರದಲ್ಲಿ ಆಯಸ್ಕಾಂತೀಯ ಬೆಟ್ಟ ಇದೆ. ಮ್ಯಾಗ್ನಟಿಕ್ ಹಿಲ್ ಎಂದೇ ಇದು ಜನಪ್ರಿಯವಾಗಿದೆ. ಹೀಗಾಗಿ ಸಾಕಷ್ಟು ದೇಶ ವಿದೇಶಗಳ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಸಿಂಧೂ ಹಾಗೂ ಜಂಸ್ಕಾರ ನದಿ ಕಣಿವೆ ಪ್ರದೇಶದ ನಡುವಿನ ಬಯಲು ಪ್ರದೇಶ ಇದಾಗಿರುವುದರಿಂದ ಈ ನದಿಗಳಲ್ಲಿ ರಿವರ್ ರ್ಯಾಂಫ್ಟಿಂಗ್ ಸಹ ನಡೆಯುತ್ತದೆ. ಬೌದ್ದಾಲಯಗಳು ಈ ಪ್ರದೇಶದಲ್ಲಿ ಹೆಚ್ಚಿವೆ. ಅಲ್ಲದೆ ಸಿಖ್‍ ಗುರುದ್ವಾರ ಕೂಡ ಇಲ್ಲಿದ್ದು ಪ್ರವಾಸಿಗರ ಭೇಟಿಯ ಸ್ಥಳವಾಗಿದೆ.

ಇನ್ನು1999ರ ಕಾರ್ಗಿಲ್ ಯುದ್ಧದ ಬಳಿಕ ಭಾರತೀಯ ಸೇನೆ ನಿಮ್ಮೊ ಪ್ರದೇಶವನ್ನು ಸೇನಾ ನೆಲೆಯಾಗಿ ಮಾಡಿಕೊಂಡಿದ್ದು, ಈ ಪ್ರದೇಶದಿಂದಲೇ ಪಾಕಿಸ್ತಾನ ಹಾಗೂ ಚೀನಾ ಮೇಲೆ ದಾಳಿ ನಡೆಸಬಹುದಾಗಿದೆ. 80ರ ದಶಕದಿಂದಲೇ ಇಲ್ಲಿ ಸೇನಾ ಡಿವಿಜನ್‍ ಗಳನ್ನು ನಿಯೋಜಿಸಲಾಗಿತ್ತಾದರೂ ಬಳಿಕ ಸೇನಾ ಸಾಮರ್ಥ್ಯವನ್ನು ಕಡಿತಗೊಳಿಸಲಾಗಿತ್ತು. ಆದರೆ ಕಾರ್ಗಿಲ್ ಕದನದ ಬಳಿಕ ಸೇನಾ ಸಾಮರ್ಥ್ಯವನ್ನುಹೆಚ್ಚಿಸಲಾಯಿತಲ್ಲದೇ ನಿಮ್ಮೊ ಪ್ರದೇಶವನ್ನು ಖಾಯಂ ಸೇನಾ ನೆಲೆಯಾಗಿ ಪರಿವರ್ತಿಸಲಾಗಿದೆ. ಲಡಾಕ್‍ ನಲ್ಲಿರುವ 2 ಸೇನಾ ನೆಲೆಗಳಲ್ಲಿ ಇದು ಸಹ ಒಂದಾಗಿದೆ. ಇನ್ನೊಂದು ಸೇನಾ ನೆಲೆ ಲೇಹ್ ನಲ್ಲಿದೆ. ನಿಮ್ಮೊ ಸೇನಾ ನೆಲೆಯ ಮತ್ತೊಂದು ವಿಶೇಷ ಎಂದರೆ ಇಲ್ಲಿಂದಲೇ ಸಿಯಾಚಿನ್ ಗಡಿಯ ಸೇನಾ ಕಾರ್ಯಾಚರಣೆಗಳು ನಿಯಂತ್ರಿಸಲ್ಪಡುತ್ತವೆ.

ಒಟ್ಟಿನಲ್ಲಿ ಶತ್ರುರಾಷ್ಟ್ರಗಳು ಎನ್ನಿಸಿಕೊಂಡಿರುವ ಪಾಕಿಸ್ತಾನ ಹಾಗೂ ಚೀನಾ ಆಕ್ರಮಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನೆಲೆ ಪ್ರಮುಖ ಎಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ತಮ್ಮ ಭೇಟಿಗಾಗಿ ನಿಮ್ಮೊ ಸೇನಾ ನೆಲೆಯನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ.

- Advertisement -
spot_img

Latest News

error: Content is protected !!