ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ತಾಯಂದಿರು ಮತ್ತು ಮಕ್ಕಳನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು.
ಕಂಕನಾಡಿ, ಪಂಪ್‌ವೆಲ್ ವೃತ್ತ, ನಂತೂರು ಸರ್ಕಲ್, ಕೆಪಿಟಿ ಮತ್ತು ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣ ಸ್ಥಳಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಂಗಳೂರು ನಗರ ಮತ್ತು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪೊಲೀಸ್ ಇಲಾಖೆಯವರ ಸಹಯೋಗದೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಎರಡು ಮಕ್ಕಳು ಹಾಗೂ ತಾಯಂದಿರೊಂದಿಗೆ ಐದು ಮಕ್ಕಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮೂರು ತಾಯಂದಿರು ಮತ್ತು ಮಕ್ಕಳನ್ನು ಹಾಗೂ ಓರ್ವ ಬಾಲಕನ ದಾಖಲಾತಿಗಳನ್ನು ಮಕ್ಕಳ ಕಲ್ಯಾಣ ಸಮಿತಿಯು ಪರಿಶೀಲನೆ ಮಾಡಿದ್ದು, ಅವರ ಸೂಚನೆ ಮೇರೆಗೆ ಕುಟುಂಬಕ್ಕೆ ಬಿಡುಗಡೆಗೊಳಿಸಲಾಯಿತು. ಉಳಿದವರಲ್ಲಿ ಎರಡು ತಾಯಂದಿರು ಮತ್ತು ಮಕ್ಕಳನ್ನು ಹಾಗೂ ಓರ್ವ ಬಾಲಕಿಯ ದಾಖಲಾತಿಗಳು ಖಾತ್ರಿಯಿಲ್ಲದ ಕಾರಣ ತಾಯಿ ಮತ್ತು ಮಕ್ಕಳನ್ನು ಪ್ರಜ್ಞ ಸ್ವಧಾರ ಕೇಂದ್ರ ಮುಡಿಪು ಇಲ್ಲಿಗೆ ಹಾಗೂ ಓರ್ವ ಬಾಲಕಿಯನ್ನು ಶ್ರೀ ರಾಮಕೃಷ್ಣ ವಾತ್ಸಲ್ಯ ಧಾಮ ದತ್ತು ಕೇಂದ್ರ ಪುತ್ತೂರು ಇಲ್ಲಿಗೆ ಮುಂದಿನ ಪುನರ್ವಸತಿಗಾಗಿ ದಾಖಲಿಸಲಾಯಿತು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.