ಮಂಗಳೂರು: ಇಸ್ಕಾನ್ ವತಿಯಿಂದ ಕುಳಾಯಿ ಕೋಡಿಕೆರೆಯ 1.5 ಎಕರೆ ಜಾಗದಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಶ್ರೀ ರಾಧಾ ಗೋವಿಂದ ದೇವಸ್ಥಾನ ನಿರ್ಮಾಣಕ್ಕೆ ಆಗಸ್ಟ್ 27ರಂದು ಬೆಳಗ್ಗೆ 8 ರಿಂದ 10 ಗಂಟೆ ನಡುವೆ ಶಿಲಾನ್ಯಾಸ ನಡೆಯಲಿದೆ.
ದೇವಳವು ವಿವಿಧ ಸಾಂಸ್ಕೃತಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಲೋಕೋಪಕಾರಿ ಚಟುವಟಿಕೆಗಳ ಕೇಂದ್ರವಾಗಲಿದೆ. ದೇವಳದ ಜತೆಗೆ ಸಾರ್ವಜನಿಕ ಅನ್ನದಾನ ಸಭಾಂಗಣ, ಗೋಶಾಲೆ, ವಿವಿಧ ತರಗತಿ ನಡೆಸುವ ಕೊಠಡಿ ಇತ್ಯಾದಿ ಮೂರು ವರ್ಷದಲ್ಲಿ ನಿರ್ಮಿಸುವ ಗುರಿ ಇದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ನಾಮನಿಷ್ಠ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ. ಭರತ್ ವೈ. ಶೆಟ್ಟಿ, ವೇದವ್ಯಾಸ ಡಿ. ಕಾಮತ್, ಸಂಜೀವ ಮಠಂದೂರು ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಇನ್ನೂ ಉಚಿತ ಆನ್‌ಲೈನ್ ಗೀತಾ ಕೋರ್ಸ್ ನಡೆಸಿದ್ದು, 70 ದೇಶಗಳ 5 ಲಕ್ಷಕ್ಕೂ ಹೆಚ್ಚು ಜನರನ್ನು 16 ಬ್ಯಾಚ್‌ಗಳ ಮೂಲಕ ತಲುಪಲಾಗಿದೆ. ಇದೀಗ ತುಳು, ಕನ್ನಡ, ಇಂಗ್ಲಿಷ್, ಮಲೆಯಾಳ, ಸೇರಿದಂತೆ ವಿವಿಧ ಭಾಷೆಗಳಲ್ಲಿ ಸೆಪ್ಟೆಂಬರ್ 16ರಿಂದ ಹೊಸ ಬ್ಯಾಚ್ ಆರಂಭಗೊಳ್ಳಲಿದ್ದು, ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದು ಅಂತ ಹೇಳಿದ್ದಾರೆ.


