
ಸುಳ್ಯ; ಪತಿಯ ಮನೆಯಲ್ಲಿ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೃತರ ತಾಯಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ಪುತ್ತೂರು ತಾಲೂಕಿನ ಸಾರೆಪುಣಿ ನಿವಾಸಿ ಜುಬೈದಾ ಅವರ ಪುತ್ರಿ ನಿಶಾನ ಅವರಿಗೆ ನಾಲ್ಕು ವರ್ಷಗಳ ಹಿಂದೆ ಸಂಪಾಜೆಯ ಅನ್ಸಾರ್ ಜೊತೆ ವಿವಾಹವಾಗಿತ್ತು. ದಂಪತಿಗೆ ಎರಡೂವರೆ ವರ್ಷದ ಮಗನಿದ್ದಾನೆ. ಜುಲೈ 18ರ ರಾತ್ರಿ ನಿಶಾನ ತಮ್ಮ ತಾಯಿಗೆ ಕರೆ ಮಾಡಿ, ‘ಗಂಡನ ಮನೆಯಲ್ಲಿ ನನಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ’ ಎಂದು ಅಳಲ ತೋಡಿಕೊಂಡಿದ್ದರು. ತಕ್ಷಣವೇ ತಾಯಿ ಕುಂಬ್ರದಿಂದ ಮಗಳ ಮನೆಗೆ ಧಾವಿಸುವಷ್ಟರಲ್ಲಿ ನಿಶಾನ ಮೃತಪಟ್ಟಿದ್ದರು.
ಗಂಡನ ಮನೆಯವರು ನಿಶಾನ ಸ್ನಾನಗೃಹದ ಶವರ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಇದನ್ನು ತಳ್ಳಿಹಾಕಿರುವ ನಿಶಾನ ತಾಯಿ ಮತ್ತು ಸಹೋದರರು, ‘ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ’ ಎಂದು ಆರೋಪಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ರವಾನಿಸಿದ್ದಾರೆ. ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ


