
ಮಂತ್ರಾಲಯ ಬಳಿ ಮಂಗಳವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಮಂಗಳೂರು ಹಾಪ್ ಕಾಮ್ಸ್ ನ ಸಿ ಇ ಒ ರವಿಚಂದ್ರ ಶೆಟ್ಟಿ(43) ಸಾವನ್ನಪ್ಪಿದ್ದಾರೆ. ರವಿಚಂದ್ರ ಶೆಟ್ಟಿ ಅವರು ಸ್ನೇಹಿತರೊಂದಿಗೆ ತಿರುಪತಿ ಯಾತ್ರೆ ಮುಗಿಸಿಕೊಂಡು ಸೋಮವಾರ ಮಂತ್ರಾಲಯದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮಂಗಳವಾರ ಮುಂಜಾನೆ ಮಂತ್ರಾಲಯ ತಲುಪಲು ಕೇವಲ 1 ರಿಂದ 2 ಕಿಲೋಮೀಟರ್ ಅಂತರವಿದ್ದಾಗ, ರವಿ ಶೆಟ್ಟಿಯವರು ಚಲಾಯಿಸುತ್ತಿದ್ದ ಕಾರು ಹಠಾತ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರವಿಚಂದ್ರ ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅದೇ ಕಾರಿನಲ್ಲಿ ಪಯಣಿಸುತ್ತಿದ್ದ ಪುರುಷೋತ್ತಮ ಭಂಡಾರಿ, ಸುದೇಶ್ ರೈ ಹಾಗೂ ಪ್ರದೀಪ್ ಅಳ್ವ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ರವಿಚಂದ್ರ ಶೆಟ್ಟಿ ಅಶೋಕ್ ನಗರ ಅವರು ಮಂಗಳೂರು ಹಾಪ್ಕಾಮ್ಸ್ ಉದ್ಯೋಗಿಯಾಗಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ನಲ್ಲಿ ಜೊತೆ ಕಾರ್ಯದರ್ಶಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಮಂಗಳೂರಿನ ಹಲವಾರು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ರವಿಚಂದ್ರ ಶೆಟ್ಟಿ ನಿಧನಕ್ಕೆ ಭ್ರಾಮರೀ ಯಕ್ಷಮಿತ್ರರು (ರಿ.) ಮಂಗಳೂರು ಟ್ರಸ್ಟ್ ಸಂತಾಪ
ಹಾಪ್ಕಾಮ್ಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿದ್ದ ರವಿಚಂದ್ರ ಶೆಟ್ಟಿ ನಿಧನಕ್ಕೆ ಭ್ರಾಮರೀ ಯಕ್ಷಮಿತ್ರರು (ರಿ.) ಮಂಗಳೂರು ಟ್ರಸ್ಟ್ ಸಂತಾಪ ಸೂಚಿಸಿದೆ.ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರೀತಿಯ ರವಿಚಂದ್ರ ಶೆಟ್ಟಿ ಅಶೋಕನಗರ ಅವರ ಅಕಾಲಿಕ ನಿಧನದ ವಾರ್ತೆ ನಮಗೆ ತೀವ್ರ ಆಘಾತ ಹಾಗೂ ದುಃಖವನ್ನುಂಟು ಮಾಡಿದೆ. ವಿಶ್ವ ಹಿಂದೂ ಪರಿಷತ್, ಬಂಟರ ಸಂಘ, ಹಾಪ್ಕಾಮ್ಸ್ ಗಣೇಶೋತ್ಸವ ಸಮಿತಿ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಸೇರಿದಂತೆ ಹತ್ತಾರು ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ನಿಂತು ಸಕ್ರಿಯವಾಗಿ ಸೇವೆ ಸಲ್ಲಿಸಿದ್ದ ಅವರು, ಕಠಿಣ ಅಯ್ಯಪ್ಪ ವ್ರತಧಾರಿಯಾಗಿ ಧಾರ್ಮಿಕ ನಿಷ್ಠೆ ಮೆರೆದಿದ್ದರು. ಅಚ್ಚುಮೆಚ್ಚಿನ ಯಕ್ಷಗಾನ ಅಭಿಮಾನಿಯಾಗಿ ಹಾಗೂ ಸಂಘಟಕರಾಗಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿದ್ದಲ್ಲದೆ, ನಮ್ಮ ‘ಭ್ರಾಮರೀ ಯಕ್ಷಮಿತ್ರರು’ ಬಳಗದ ಆರಂಭದ ದಿನದಿಂದಲೂ ನಮ್ಮ ಜತೆಗಿದ್ದು ಮಾರ್ಗದರ್ಶನ ನೀಡಿದ ಪ್ರೀತಿಯ ಹಿತೈಷಿ ಹಾಗೂ ಹಿರಿಯ ಚೇತನವಾಗಿದ್ದರು.ಅವರ ಸರಳತೆ, ಸ್ನೇಹಪರ ಸ್ವಭಾವ ಮತ್ತು ಸಮಾಜಮುಖಿ ಚಿಂತನೆ ಎಂದೆಂದಿಗೂ ಸ್ಮರಣೀಯವಾಗಿದ್ದು, ಅವರ ಅಗಲಿಕೆಯಿಂದ ನಮ್ಮ ಬಳಗಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅಗಲಿದ ಆ ದಿವ್ಯ ಚೇತನಕ್ಕೆ ಆ ದೇವರಲ್ಲಿ ಚಿರಶಾಂತಿಯನ್ನು ಕೋರುತ್ತಾ, ಈ ತೀವ್ರ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಶೋಕತಪ್ತ ಕುಟುಂಬ ವರ್ಗಕ್ಕೆ, ಬಂಧು-ಮಿತ್ರರಿಗೆ ಆ ಭಗವಂತ ಕರುಣಿಸಲಿ ಎಂದು ಮನಪೂರ್ವಕವಾಗಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.


