
ಮಂಗಳೂರು: ಬಿ.ಸಿ.ರೋಡ್ ಲಾವಣ್ಯ ಹತ್ಯೆ ಪ್ರಕರಣ: ಇಲಿಪಾಷಾಣ ಸೇವಿಸಿದ್ದ ಆರೋಪಿ ಚೇತನಿಗೆ ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಲಾವಣ್ಯ ಗೌಡ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ ಚೇತನ್ ಸದ್ಯ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ವೈದ್ಯಕೀಯ ನಿಗಾದಲ್ಲಿದ್ದಾನೆ.
ಕೊಲೆ ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದ ಈತನನ್ನು ಪೊಲೀಸರು ಬಂಧಿಸಿದಾಗ, ತಾನು ಇಲಿಪಾಷಾಣ ಸೇವಿಸಿರುವುದಾಗಿ ತಿಳಿಸಿದ್ದನು. ತಕ್ಷಣ ಆತನನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತಾದರೂ, ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ವಿಷ ಸೇವಿಸಿರುವ ಹಿನ್ನೆಲೆಯಲ್ಲಿ ಆರೋಪಿಯ ಆರೋಗ್ಯ ಸ್ಥಿತಿಯನ್ನು ಕನಿಷ್ಠ ಐದು ದಿನಗಳ ಕಾಲ ನಿರಂತರವಾಗಿ ಪರಿಶೀಲಿಸಬೇಕೆಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ಸೂಚಿಸಿದ್ದು, ಈ ಕಾರಣಕ್ಕಾಗಿ ಆತನಿಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಆರೋಪಿಗೆ ಆಸ್ಪತ್ರೆಯಲ್ಲೇ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಆರೋಪಿಯ ಆರೋಗ್ಯ ಸ್ಥಿತಿ ಸುಧಾರಿಸಿ, ಆತ ವಿಚಾರಣೆಗೆ ಅರ್ಹನಾಗಿದ್ದಾನೆ ಎಂದು ವೈದ್ಯರು ಪ್ರಮಾಣೀಕರಿಸಿದ ತಕ್ಷಣವೇ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ. ಸದ್ಯ ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಯ ವೈದ್ಯಕೀಯ ಚಿಕಿತ್ಸೆ ಪೂರ್ಣಗೊಂಡ ನಂತರ ಕಾನೂನು ಕ್ರಮಗಳು ಮುಂದುವರಿಯಲಿವೆ.


