
ಮಂಗಳೂರು: ಬರ್ಗರ್, ಪಿಜ್ಜಾದಂತಹ ಜಂಕ್ ಫುಡ್‌ಗಳಿಂದಾಗಿ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು 10ನೇ ತರಗತಿಯವರೆಗಿನ ಶಾಲೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಇವುಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ವೆನ್‌ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ ಸಭಾಂಗಣದಲ್ಲಿ ಶನಿವಾರ ನಡೆದ ಆಸ್ಪತ್ರೆಯ ಕುಂದುಕೊರತೆ ಹಾಗೂ ಅಭಿವೃದ್ಧಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಆಹಾರ ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಆಹಾರ ತಪಾಸಣಾ ಪ್ರಯೋಗಾಲಯವನ್ನು (ಲ್ಯಾಬ್) ಮೇಲ್ದರ್ಜೆಗೇರಿಸಲಾಗುವುದು. ಜಂಕ್ ಫುಡ್ ತಯಾರಿಸುವ ದೊಡ್ಡ ಕಂಪನಿಗಳೇ ಆದರೂ, ಆಹಾರದ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಅವರು ಸುಪ್ರೀಂ ಕೋರ್ಟ್‌ಗೆ ಹೋದರೂ ಜಯ ಸಿಗದಂತೆ ಕಾನೂನುಬದ್ಧವಾಗಿ ಬಿಗಿಯಾದ ದಾಖಲೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಈ ಅತ್ಯಾಧುನಿಕ ಲ್ಯಾಬ್ ಸಹಕಾರಿಯಾಗಲಿದೆ. ಈ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಸಚಿವರು ವಿವರಿಸಿದರು.


