Sunday, April 28, 2024
Homeಆರಾಧನಾಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ನಡೆದ 48 ದಿನಗಳ ಮಂಡಲೋತ್ಸವ ಸಂಪನ್ನ

ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ನಡೆದ 48 ದಿನಗಳ ಮಂಡಲೋತ್ಸವ ಸಂಪನ್ನ

spot_img
- Advertisement -
- Advertisement -

ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ನಡೆದ 48 ದಿನಗಳ ಮಂಡಲೋತ್ಸವ ರವಿವಾರ ಸಂಪನ್ನಗೊಂಡಿತು.

ಅಯೋಧ್ಯೆ ಯಾದ್ಯಂತ ಸಂಭ್ರಮ, ಸಡಗರದ ಜತೆಗೆ ಹಬ್ಬದ ವಾತಾವರಣ ಮನೆ ಮಾಡಿತ್ತು. ಶ್ರೀ ರಾಮ ಪ್ರಾಣಪ್ರತಿಷ್ಠೆಯ ಅನಂತರ ಜ. 23ರಿಂದ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಂಡಲೋತ್ಸವ ಆರಂಭವಾಗಿತ್ತು. ಮಾ. 10ರ ಬೆಳಗ್ಗೆಯಿಂದಲೇ ಶ್ರೀಪಾದರ ನೇತೃತ್ವದಲ್ಲಿ ಶ್ರೀ ರಾಮಮಂದಿರದ ಗರ್ಭಗುಡಿಯಲ್ಲಿ ಸರಯೂ, ಗಂಗಾ, ಅಲಕಾನಂದಾ ಸಹಿತ ಅನೇಕ ಪುಣ್ಯನದಿಗಳ ಪವಿತ್ರ ಜಲ ತುಂಬಿದ 1008 ಕಲಶಾಭಿಷೇಕ, ಬ್ರಹ್ಮ ಕಲಶೋತ್ಸವದ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ರವಿವಾರ ಶ್ರೀರಾಮ ದೇವರಿಗೆ ವೈಭವದಿಂದ 1008 ಕಲಶಾಭಿಷೇಕ ಸಹಿತ ಬ್ರಹ್ಮಕಲಶೋತ್ಸವ ನೆರವೇರಿಸುವ ಬಗ್ಗೆ ಬೆಳಗ್ಗೆಯಿಂದಲೇ ನೂರಾರು ಋತ್ವಿಜರ ಉಪಸ್ಥಿತಿಯಲ್ಲಿ ತತ್ವ ಹೋಮ ಸಹಿತ ವಿವಿಧ ಹೋಮ ಹವನಾದಿಗಳು, ಕಲಶ ಸ್ಥಾಪನಾ ಪೂರ್ವಕ ಕಲಶ ಪೂಜೆ ವಿಧಿ ವಿಧಾನಗಳು ನಡೆದವು. ಈ ಮಧ್ಯೆ ಮಂದಿರದಲ್ಲಿ ಎಂದಿನಂತೆ ಅಸಂಖ್ಯ ಭಕ್ತರು ಸಾಲು ಸಾಲು ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.ಮಂದಿರ ನಿರ್ಮಾಣ ಉಸ್ತುವಾರಿಯಾಗಿರುವ ವಿಶ್ವಹಿಂದೂ ಪರಿಷತ್‌ನ ರಾಷ್ಟ್ರೀಯ ಪ್ರಮುಖರಾದ ಗೋಪಾಲ ನಾಗರಕಟ್ಟೆ ಸಹಿತ ಅನೇಕರು ಉಪಸ್ಥಿತರಿದ್ದರು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ‘ಅಯೋಧ್ಯೆಯ ಶ್ರೀ ರಾಮ ದೇವರ ನೂತನ ಮಂದಿರದಲ್ಲಿ 48 ದಿನಗಳ ಮಂಡಲೋತ್ಸವ ಸಂಪನ್ನಗೊಂಡಿದೆ. ಎಲ್ಲ ದೇವಾನು ದೇವತೆಗಳನ್ನು ಆವಾಹನೆ ಮಾಡಿ, ಅಭಿಷೇಕ ನಡೆಸಲಾಗಿದೆ. ಶ್ರೀ ರಾಮ ದೇವರು ಎಲ್ಲರನ್ನೂ ಅನುಗ್ರಹಿಸಲಿ. ಎಲ್ಲರ ಸಹಕಾರದೊಂದಿಗೆ ಈ ಕಾರ್ಯ ನಿರ್ವಿಘ್ನವಾಗಿ ನೆರವೇರಿದೆ. ಶ್ರೀ ರಾಮ ದೇವರು ಲೋಕಕ್ಕೆ ಕ್ಷೇಮ ಉಂಟುಮಾಡಲಿ. ರಾಮ ಮಂದಿರ ನಿರ್ಮಾಣವಾಗಿದೆ, ಇದು ರಾಮ ರಾಜ್ಯಕ್ಕೆ ನಾಂದಿಯಾಗಲಿ,’ ಎಂದರು.

ವಿಹಿಂಪ ರಾಷ್ಟ್ರೀಯ ಮುಖಂಡ, ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ ನಾಗರಕಟ್ಟೆ, ‘ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಅನಂತರ ಶ್ರೀ ಪೇಜಾವರ ಮಠಾಧೀಶರ ನೇತೃತ್ವದಲ್ಲಿ ವೇದ, ಆಗಮಶಾಸ್ತ್ರದ ಪಂಡಿತರಿಂದ 48 ದಿನಗಳ ಮಂಡಲೋತ್ಸವ ಪೂರ್ಣಗೊಂಡಿದೆ. ಮಂಡಲೋತ್ಸವ ಎಲ್ಲರಲ್ಲೂ ಆನಂದ ಉಂಟುಮಾಡಿದೆ. ವೈಭವದ, ಸಂತೋಷದ, ಸಂಭ್ರಮದ ಉತ್ಸವವಾಗಿ ಮಂಡಲೋತ್ಸವ ನಡೆದಿದೆ,’ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!