Friday, May 17, 2024
Homeಇತರಬಟ್ಟೆಯ ಮೇಲೆ ಪತ್ನಿಯ ರಕ್ತದ ಕಲೆ, ಜೈಲು ಸೇರಿದ ಪತಿ

ಬಟ್ಟೆಯ ಮೇಲೆ ಪತ್ನಿಯ ರಕ್ತದ ಕಲೆ, ಜೈಲು ಸೇರಿದ ಪತಿ

spot_img
- Advertisement -
- Advertisement -

ಮುಜಫರ್​ನಗರ : ಕೊಲೆಯಾದ ಪತ್ನಿಯ ರಕ್ತದ ಕಲೆಗಳು ತನ್ನ ಬಟ್ಟೆಯ ಮೇಲೆ ಹೇಗೆ ಬಂತೆಂದು ವಿವರಿಸಲು ವಿಫಲನಾದ ಹಿನ್ನೆಲೆಯಲ್ಲಿ ಮುಂಬೈನ ಸೆಷೆನ್ಸ್​ ನ್ಯಾಯಾಲಯ ಪತಿಗೆ ಜೀವಂತವಿರುವವರೆಗೂ ಜೈಲುಶಿಕ್ಷೆ ವಿಧಿಸಿದೆ.

ಮುಂಬೈ ಮುಲುಂದ್​ ನಿವಾಸಿ ಜಯೇಶ್​ ಮಹದ್ಲೇಕರ್​ (40) ಶಿಕ್ಷೆಗೆ ಒಳಗಾದವನು. ಈತನ ವಿರುದ್ಧ ತನ್ನ ಪತ್ನಿ ಶ್ರೇಯಾ (33) ಅವರನ್ನು ಕೊಲೆ ಮಾಡಿದ ಆರೋಪ ವಿಧಿಸಲಾಗಿತ್ತು. ತನ್ನ ಪತ್ನಿ ಕೊಲೆಯಾದ ದಿನ ತಾನು ಹೈದರಾಬಾದ್​ನಲ್ಲಿ ಇದ್ದುದಾಗಿ ಜಯೇಶ್​ ಪ್ರತಿಪಾದಿಸಿದ್ದ. ಇದಕ್ಕೆ ಪೂರಕವಾಗಿ ರೈಲು, ವಿಮಾನ ಅಥವಾ ಬಸ್​ ಟಿಕೆಟ್​ ಅನ್ನು ಸಾಕ್ಷ್ಯವಾಗಿ ಒದಗಿಸಲು ವಿಫಲನಾಗಿದ್ದ. ಆದರೆ, ಕೊಲೆ ನಡೆದ ದಿನ ಆತ ಧರಿಸಿದ್ದ ಎನ್ನಲಾದ ಶರ್ಟ್​ ಮೇಲೆ ಆತನ ಪತ್ನಿಯ ರಕ್ತದ ಕಲೆಗಳು ಪತ್ತೆಯಾಗಿದ್ದವು. ಈ ಕಲೆಗಳು ಹೇಗೆ ಬಂದವು ಎಂಬ ಬಗ್ಗೆ ಸ್ಪಷ್ಟನೆ ನೀಡುವಲ್ಲಿ ಆತ ವಿಫಲನಾಗಿದ್ದರಿಂದ, ಕೋರ್ಟ್​ ಆತನಿಗೆ ಜೀವಿತಾವಧಿ ಜೈಲುಶಿಕ್ಷೆ ವಿಧಿಸಿದೆ.

ಪ್ರೇಮ ಪಾಶಕ್ಕೆ ಸಿಲುಕಿದ್ದ ಜಯೇಶ್​ ಮತ್ತು ಶ್ರೇಯಾ ಇಬ್ಬರೂ ಮನೆಯವರ ವಿರೋಧದ ಹೊರತಾಗಿ 2003ರಲ್ಲಿ ಓಡಿ ಹೋಗಿ ಮದುವೆಯಾಗಿದ್ದರು. ಜಯೇಶ್​ ಇಂಜಿನಿಯರ್​ ಆಗಿದ್ದರೆ, ಶ್ರೇಯಾ ಖಾಸಗಿ ಆಸ್ಪತ್ರೆಯ ಉದ್ಯೋಗಿಯಾಗಿದ್ದರು. 2005ರಲ್ಲಿ ದಂಪತಿಗೆ ಗಂಡು ಮಗು ಕೂಡ ಜನಿಸಿತ್ತು.

ಸ್ವಲ್ಪ ದಿನಗಳ ಬಳಿಕ ಜಯಶ್​ಗೆ ತನ್ನ ಪತ್ನಿಯ ಶೀಲದ ಬಗ್ಗೆ ಶಂಕೆ ಮೂಡಿತ್ತು. ಆಕೆ ವ್ಯಕ್ತಿಯೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದಲ್ಲಿ ಆತ ಶ್ರೇಯಾಳ ಮೇಲೆ ಪ್ರತಿದಿನವೂ ಹಲ್ಲೆ ಮಾಡುತ್ತಿದ್ದ. ಒಮ್ಮೆಯಂತೂ ಆಕೆಯ ತಲೆಗೂದಲು ಕಿತ್ತು ಹಾಕಿ, ಕುಕ್ಕರ್​ ಮುಚ್ಚಳದಿಂದ ಆಕೆಯ ಮೇಲೆ ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿದ್ದ.

ಪತಿಯ ನಿರಂತರ ಕಿರುಕುಳ ಸಹಿಸಿಕೊಂಡೇ ಬರುತ್ತಿದ್ದ ಶ್ರೇಯಾ ಕೊನೆಗೆ ಬೇಸತ್ತು 2016ರ ಡಿಸೆಂಬರ್​ನಲ್ಲಿ ಪುತ್ರನೊಂದಿಗೆ ತವರುಮನೆ ಸೇರಿದ್ದಳು. ಆದರೆ, 2017ರ ಜನವರಿ 26ರಂದು ಅತ್ತೆಯ ಮನೆಗೆ ಬಂದ ಜಯೇಶ್​, ತನ್ನ ತಪ್ಪನ್ನು ತಿದ್ದಿಕೊಂಡು ಶ್ರೇಯಾಳ ಜತೆ ಬಾಳ್ವೆ ಮಾಡುವುದಾಗಿಯೂ, ಆಕೆಯನ್ನು ತನ್ನೊಂದಿಗೆ ಕಳುಹಿಸಿಕೊಡಬೇಕು ಎಂದು ಅತ್ತೆಗೆ ಮನವಿ ಮಾಡಿಕೊಂಡಿದ್ದ. ಆದರೆ, ಅಳಿಯ ತಮ್ಮ ಪುತ್ರಿ ಹಾಗೂ ಮೊಮ್ಮಗನಿಗೆ ಚಿತ್ರಹಿಂಸೆ ಕೊಡುವ ಸಾಧ್ಯತೆ ಇರುವುದರಿಂದ ಅವರು ನಿರಾಕರಿಸಿದ್ದರು. ತಾಯಿಯ ಮಾತನ್ನೇ ಶ್ರೇಯಾ ಕೂಡ ಪುನರುಚ್ಚರಿಸಿದ್ದಳು. ಇದಾದ ಬಳಿಕ ಜಯೇಶ್​ ಅತ್ತೆ ಮನೆಯಿಂದ ಹೊರಟು ಹೋಗಿದ್ದ.

ಇದಾದ ಸ್ವಲ್ಪ ಹೊತ್ತಿನಲ್ಲೇ ಶ್ರೇಯಾ ಕೂಡ ಮನೆಯಿಂದ ಹೊರಹೋಗಿದ್ದಳು. ಬಹುಶಃ ಕೆಲಸಕ್ಕೆ ಹೋಗಿರಬೇಕು ಎಂದು ತಾಯಿಯೂ ಸುಮ್ಮನಾಗಿದ್ದರು. ಆದರೆ, ಕಚೇರಿ ಅವಧಿ ಮುಗಿದ ಬಳಿಕವೂ ಶ್ರೇಯಾ ಮರಳದಿದ್ದರಿಂದ, ಅನುಮಾನಗೊಂಡ ಆಕೆ ಪುತ್ರಿಗಾಗಿ ಎಲ್ಲೆಡೆ ಹುಡುಕಾಟ ಆರಂಭಿಸಿದ್ದರು. ಅದರೆ ಪರಿಚಯದವರು ಒಬ್ಬರು ಕರೆ ಮಾಡಿ, ಗಂಡನ ಮನೆಯ ಬಳಿ ಶ್ರೇಯಾ ರಕ್ತದ ಮಡುವಿನಲ್ಲಿ ಬಿದ್ದಿರುವುದಾಗಿ ಅವರಿಗೆ ಕರೆ ಮಾಡಿದ್ದರು. ಹೋಗಿ ನೋಡಿದಾಗ ಶ್ರೇಯಾ ಕೊಲೆಯಾಗಿರುವುದು ಗೊತ್ತಾಗಿತ್ತು. ಆಕೆಯನ್ನು ಅಳಿಯನೇ ಕೊಲೆ ಮಾಡಿರಬಹುದು ಎಂಬ ಶಂಕೆಯಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದರು.

ತನಿಖೆ ಮಾಡಿದ ಪೊಲೀಸರು ಶ್ರೇಯಾ ಕೊಲೆಯಾದ ದಿನದಂದು ಜಯೇಶ್​ ಧರಿಸಿದ್ದ ಶರ್ಟ್​ ಮೇಲೆ ಶ್ರೇಯಾಳ ರಕ್ತದ ಕಲೆಗಳನ್ನು ಗಮನಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಆತನಿಂದ ಸಮಂಜಸ ಉತ್ತರ ಬಂದಿರಲಿಲ್ಲ. ಇದನ್ನೇ ಕೋರ್ಟ್​ಗೂ ತಿಳಿಸಿದ್ದರು. ಇದು ಸೇರಿ, ಈ ಹಿಂದೆ ಕೂಡ ಜಯೇಶ್​ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಹಲವು ಘಟನೆಗಳು ನಡೆದಿರುವುದನ್ನು ಪರಿಗಣಿಸಿ, ಶ್ರೇಯಾಳನ್ನು ಆತನೇ ಕೊಲೆ ಮಾಡಿದ್ದಾನೆ ಎಂದು ನಿರ್ಧರಿಸಿ, ಆತನಿಗೆ ಜೀವಿತಾವಧಿ ಜೈಲುಶಿಕ್ಷೆ ವಿಧಿಸಿದೆ.

- Advertisement -
spot_img

Latest News

error: Content is protected !!