ಮುಂಬೈ: ಕೊರೋನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಲಾಗಿದ್ದು ಇದರಿಂದಾಗಿ ಅಗತ್ಯ ವಸ್ತು ಮತ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಕೊರೋನಾ ಪರಿಣಾಮದಿಂದ ಅನೇಕ ಕ್ಷೇತ್ರಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಷೇರುಪೇಟೆ ಪಾತಾಳಕ್ಕೆ ಕುಸಿದಿದ್ದು, ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಬರೋಬ್ಬರಿ 48 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ. ಕೊರೋನಾದಿಂದ ಶ್ರೀಮಂತರ ಸಂಪತ್ತು ಕರಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ದೇಶದ ಉದ್ಯಮಿಯೊಬ್ಬರು ಭರ್ಜರಿ ಲಾಭದತ್ತ ಮುನ್ನುಗ್ಗುತ್ತಿದ್ದು, ದೇಶದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ರಾಧಾಕಿಶನ್ ದಮಾನಿ ಮಾಲೀಕತ್ವದ ಡಿಮಾರ್ಟ್ ಅವೆನ್ಯೂ ಸೂಪರ್ ಮಾರ್ಟ್ ಸಂಸ್ಥೆಯು ಲಾಕ್ ಡೌನ್ ನಡುವೆಯೂ ಭರ್ಜರಿ ಲಾಭದತ್ತ ಮುನ್ನುಗ್ಗುತ್ತಿದೆ. ಅಗತ್ಯ ವಸ್ತುಗಳ ಮಾರಾಟ ಸಂಸ್ಥೆಯಾಗಿರುವ ಡಿಮಾರ್ಟ್ ದೇಶಾದ್ಯಂತ ಸುಮಾರು 1300 ಮಾರಾಟ ಮಳಿಗೆಗಳನ್ನು ಹೊಂದಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾಡುವ ಮೂಲಕ ಭರ್ಜರಿ ಲಾಭ ಗಳಿಸಿದೆ. ರಾಧಾಕಿಶನ್ ದಮಾನಿ ಅವರ ಆದಾಯದಲ್ಲಿ ಶೇಕಡ 5 ರಷ್ಟು ಏರಿಕೆಯಾಗಿದ್ದು ದೇಶದ 12 ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ಅವರು ಸ್ಥಾನ ಗಳಿಸಿದ್ದಾರೆ ಎಂದು ಹೇಳಲಾಗಿದೆ