
ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆ ಕುಳಿತು ಯುವಕನೊಬ್ಬ ಹುಚ್ಚಾಟ ಮೆರಿದಿದ್ದಲ್ಲದೇ ಪೊಲೀಸರ ಮೇಲೆಯೇ ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಕೋಟತಟ್ಟು ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನದ ಎದುರು ಮಂಗಳವಾರ ಬೆಳಗ್ಗೆ ನಡೆದಿದೆ.ಯುವಕನ ದಾಳಿಯಿಂದಾಗಿ ಕೋಟ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ರಾಘವೇಂದ್ರ ಬಿ.ಎನ್. ಅವರ ಎಡಗೈಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಬೆಲ್ಲದ ಗಣಪತಿ ದೇವಸ್ಥಾನ ಸಮೀಪದ ನಿವಾಸಿ ರಂಜಿತ್ ಸೋಮಯಾಜಿ (25)ಯನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 14 ರಂದು ಬೆಳಿಗ್ಗೆ ಕೋಟತಟ್ಟು ಹೆದ್ದಾರಿ ಬದಿಯಲ್ಲಿ ವ್ಯಕ್ತಿಯೊಬ್ಬ ಟಿವಿ, ಲ್ಯಾಪ್‌ಟಾಪ್ ಹಾಗೂ ಸೌಂಡ್ ಬಾಕ್ಸ್ ಇಟ್ಟುಕೊಂಡು ಜೋರಾಗಿ ಮ್ಯೂಸಿಕ್ ಹಾಕಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಬಗ್ಗೆ ಠಾಣೆಗೆ ದೂರು ಬಂದಿತ್ತು. ಸ್ಥಳಕ್ಕೆ ಧಾವಿಸಿದ ಅಧಿಕಾರಿ ರಾಘವೇಂದ್ರ ಅವರು ಸೌಮ್ಯವಾಗಿಯೇ ಪ್ರಶ್ನಿಸಿದಾಗ ಆಕ್ರೋಶಗೊಂಡ ಆರೋಪಿ, ಪೊಲೀಸರ ಮೇಲೆಯೇ ರೇಗಾಡಿದ್ದಾನೆ. ಅಷ್ಟೇ ಅಲ್ಲದೆ, ರಸ್ತೆಯಲ್ಲಿದ್ದ ಮರದ ಟೇಬಲ್ ಹಾಗೂ ಸೌಂಡ್ ಸಿಸ್ಟಮ್‌ಗಳನ್ನು ರಾಷ್ಟ್ರೀಯ ಹೆದ್ದಾರಿಯ ಮಧ್ಯಕ್ಕೆ ತಂದಿಟ್ಟು ವಾಹನ ಸಂಚಾರಕ್ಕೆ ತಡೆ ಒಡ್ಡಿದ್ದಾನೆ. ಜೊತೆಗೆ ಪೊಲೀಸರ ಸರ್ಕಾರಿ ಬೈಕ್ ಅನ್ನು ತಳ್ಳಿ ಜಖಂಗೊಳಿಸಿದ್ದಾನೆ.
ಬಳಿಕ ತನ್ನ ಮನೆಗೆ ಓಡಿಹೋದ ಆರೋಪಿ, ಅಲ್ಲಿಂದ ಚೂಪಾದ ಕತ್ತಿ ಹಾಗೂ ಕೊಡಲಿ ಹಿಡಿದುಕೊಂಡು ಬಂದು, “ಈ ಪೊಲೀಸರ ತಲೆ ನನಗೆ ಬೇಕು, ಇವರನ್ನು ಕೊಂದು ಹಾಕುತ್ತೇನೆ” ಎಂದು ಕಿರುಚುತ್ತಾ ಅಧಿಕಾರಿ ರಾಘವೇಂದ್ರ ಅವರ ಮೇಲೆ ಮುಗಿಬಿದ್ದಿದ್ದಾನೆ. ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ರಾಘವೇಂದ್ರ ಅವರ ಕೈಗೆ ಕತ್ತಿ ತಗುಲಿ ಗಾಯವಾಗಿದೆ.
ಸರ್ಕಾರಿ ಸಮವಸ್ತ್ರದಲ್ಲಿದ್ದ ಕರ್ತವ್ಯನಿರತ ಅಧಿಕಾರಿಯ ಕೊಲೆಗೆ ಯತ್ನಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪಿಯ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಗಂಭೀರ ಮೊಕದ್ದಮೆ ದಾಖಲಾಗಿದೆ.


