ಕಾರವಾರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹಳದೀಪುರದ ನಿರ್ಜನ ಪ್ರದೇಶದಲ್ಲಿ ನವಜಾತ ಶಿಶುವಿನ ಮೃತದೇಹ ಕಂಡು ಬಂದಿದ್ದು ತನಿಖೆ ನಡೆಸಿದ ಪೊಲೀಸರು ಪ್ರಕರಣ ಬಯಲಿಗೆಳೆದಿದ್ದಾರೆ.
ಮದುವೆಗೆ ಮೊದಲೇ ಲೈಂಗಿಕ ಸಂಪರ್ಕ ಹೊಂದಿದ್ದ ಪ್ರೇಮಿಗಳು 9 ತಿಂಗಳ ಬಳಿಕ ಜನಿಸಿದ ನವಜಾತ ಶಿಶುವನ್ನು ಕೊಂದು ಸ್ಮಶಾನದ ಬಳಿ ಬಿಸಾಕಿದ್ದಾರೆ. ಪೊಲೀಸ್ ತನಿಖೆಯಲ್ಲಿ ವಿಷಯ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನವಜಾತ ಶಿಶುವಿನ ತಾಯಿ, ಆಕೆಯ ಪ್ರಿಯಕರ ಮತ್ತು ಯುವತಿಯ ತಂದೆ, ತಾಯಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಯುವಕ, ಯುವತಿ ಪ್ರೀತಿಸಿದ್ದು ಮದುವೆಯಾಗುವ ಮೊದಲೇ ಅವರ ನಡುವೆ ದೈಹಿಕ ಸಂಪರ್ಕ ಬೆಳೆದಿದೆ. ಯುವತಿ ಗರ್ಭಿಣಿಯಾಗಿದ್ದರೂ ಆಕೆಯ ಮನೆಯವರು ವಿರೋಧ ವ್ಯಕ್ತಪಡಿಸಿರಲಿಲ್ಲ. ಇದರಿಂದ ಇಬ್ಬರು ಆಗಾಗ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು. ಗರ್ಭಿಣಿಯಾಗಿ 9 ತಿಂಗಳ ಬಳಿಕ ಯುವತಿಗೆ ಮನೆಯಲ್ಲೇ ಹೆರಿಗೆ ಮಾಡಿಸಿದ್ದು ಮದುವೆಗೂ ಮೊದಲೇ ಮಗುವಾದರೆ ಮರ್ಯಾದೆ ಹೋಗುತ್ತದೆ ಎಂದು ನವಜಾತ ಶಿಶುವನ್ನು ಕೊಲೆಗೈದು ಸ್ಮಶಾನದ ಬಳಿ ಎಸೆದಿದ್ದಾರೆ.
ಸ್ಥಳೀಯರಿಂದ ಮಾಹಿತಿ ಪಡೆದ ಹೊನ್ನಾವರ ತಾಲೂಕು ಆರೋಗ್ಯ ಕೇಂದ್ರದ ಸಿಬ್ಬಂದಿ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಪ್ರಕರಣ ಬಯಲಿಗೆಳೆದು ಆರೋಪಿಗಳನ್ನು ಬಂಧಿಸಿದ್ದಾರೆ.