ಮಂಗಳೂರು, ಎ.17: ಲಾಕ್ಡೌನ್ ಉಲ್ಲಂಘಿಸಿ ಸಂಚರಿಸುತ್ತಿದ್ದ ಕಾರೊಂದನ್ನು ಪೊಲೀಸರು ತಡೆದು ತಪಾಸಣೆ ನಡೆಸುತ್ತಿದ್ದ ವೇಳೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ, ಪೊಲೀಸ್ ಸಿಬ್ಬಂದಿಯ ಮೇಲೆ ಕಾರು ಹತ್ತಿಸಲು ಯತ್ನಿಸಿರುವ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಲ್ಬಾಗ್ ಸಮೀಪ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿ ಪಿವಿಎಸ್ ಬಳಿಯ ನಿವಾಸಿ ಸುರೇಶ್ ರಾವ್ ಎಂಬ ಹಿರಿಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಗುರುವಾರ ಲಾಲ್ಬಾಗ್ ಬಳಿ ಕರ್ತವ್ಯದಲ್ಲಿದ್ದ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಅದೇರೀತಿ ಸಂಜೆ 6 ಗಂಟೆ ಸುಮಾರಿಗೆ ಸುರೇಶ್ ರಾವ್ ಚಲಾಯಿಸುತ್ತಿದ್ದ ಕಾರನ್ನು ತಡೆದ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿರುವ ಬಗ್ಗೆ ಪ್ರಶ್ನಿಸಿ, ಪಾಸ್ ತೋರಿಸುವಂತೆ ಹೇಳಿದ್ದಾರೆ. ಈ ವೇಳೆ ಆರೋಪಿ ಉಡಾಫೆಯಿಂದ ವರ್ತಿಸಿದ್ದಲ್ಲದೆ, ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯ ಕಾರನ್ನು ವಶಕ್ಕೆ ಪಡೆದಿರುವ ಉರ್ವಾ ಠಾಣಾ ಪೊಲೀಸರು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.