ಬೆಂಗಳೂರು; ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ನಿರುದ್ಯೋಗಿ ಯುವಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಅಪ್ಪ ಮಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಶಂಶಾದ್ ಬೇಗಂ ಹಾಗೂ ಆಕೆಯ ತಂದೆ ಮನ್ಸೂರ್ ಅಹಮದ್ ಬಂಧಿತರು.
ಅಪ್ಪ-ಮಗಳ ಈ ಕಿಲಾಡಿ ಜೋಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 5 ಕೋಟಿ 30 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಲೂಟಿ ಮಾಡಿದ್ದಾರೆ ಅನ್ನೋದು ತನಿಖೆಯಲ್ಲಿ ಬಯಲಾಗಿದೆ.
ಉತ್ತರ ಕರ್ನಾಟಕದ ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈ ಜೋಡಿ ತಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ ಎಂದು ನಂಬಿಸುತ್ತಿದ್ದರು. ರೈಲ್ವೆ, ಆದಾಯ ತೆರಿಗೆ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ ಹಾಗೂ ಆರೋಗ್ಯ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೊಡಿಸುವುದಾಗಿ ಹಣ ಪೀಕುತ್ತಿದ್ದರು.
ಇವರು ಯಾವ ಲೆವಲ್ ಗೆ ವಂಚಿಸುತ್ತಿದ್ದರು ಎಂದರೆ ಇವರು ಕೇವಲ ಹಣ ಪಡೆದು ಸುಮ್ಮನಾಗುತ್ತಿರಲಿಲ್ಲ. ಬದಲಾಗಿ ನಂಬಿಕೆ ಹುಟ್ಟಿಸಲು. ಬೆಂಗಳೂರು, ಕೋಲ್ಕತ್ತಾ ಮತ್ತು ಮುಂಬೈನಂತಹ ನಗರಗಳಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸೃಷ್ಟಿಸಿದ್ದರು. ಅಲ್ಲಿ ಯುವಕರಿಗೆ 4 ತಿಂಗಳ ಕಾಲ ನಕಲಿ ತರಬೇತಿ ನೀಡುತ್ತಿದ್ದರು. ತರಬೇತಿ ಮುಗಿದ ನಂತರ ಅಧಿಕೃತವಾಗಿ ಕಾಣುವ ನಕಲಿ ನೇಮಕಾತಿ ಪತ್ರಗಳನ್ನು ನೀಡಿ ವಂಚಿಸುತ್ತಿದ್ದರು.
ನೇಮಕಾತಿ ಪತ್ರ ಪಡೆದು ಕೆಲಸಕ್ಕೆ ಹೋದಾಗ ಅದು ನಕಲಿ ಎಂದು ತಿಳಿದು ಯುವಕರು ಕಂಗಾಲಾಗಿದ್ದಾರೆ. ಮೋಸ ಹೋದ ಸಂತ್ರಸ್ತರು ಸಿಸಿಬಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಪ್ಪ-ಮಗಳನ್ನು ಜೈಲಿಗಟ್ಟಿದ್ದಾರೆ. ಸದ್ಯ ಬಂಧಿತರಿಂದ ಹೆಚ್ಚಿನ ಮಾಹಿತಿ ಪಡೆಯಲು ವಿಚಾರಣೆ ಮುಂದುವರಿಸಲಾಗಿದೆ.


