Thursday, June 4, 2026
Homeತಾಜಾ ಸುದ್ದಿಕೊರೊನಾದಿಂದ ಕೆಲಸ ಕಳೆದುಕೊಂಡ ಶಿಕ್ಷಕ, ಕೈ ಹಿಡಿಯಿತು ಭಜ್ಜಿ ವ್ಯಾಪಾರ

ಕೊರೊನಾದಿಂದ ಕೆಲಸ ಕಳೆದುಕೊಂಡ ಶಿಕ್ಷಕ, ಕೈ ಹಿಡಿಯಿತು ಭಜ್ಜಿ ವ್ಯಾಪಾರ

- Advertisement -
- Advertisement -

ಹೈದರಾಬಾದ್: ಕೊರೊನಾ ಅನ್ನೋ ಕಿರಾತಕ ಆರೋಗ್ಯ ಮತ್ತು ಜೀವವನ್ನು ಕಿತ್ತುಕೊಳ್ಳುವುದರ ಜತೆ ಜತೆಗೆ ಬದುಕುಳಿದವರನ್ನೂ ಇನ್ನಿಲ್ಲದ ರೀತಿಯಲ್ಲಿ ಹಿಂಸಿಸುತ್ತಿದೆ. ವೈರಸ್ ಹರಡುವಿಕೆ ತಪ್ಪಿಸಲು ಜಾರಿಯಾದ ಲಾಕ್​ಡೌನ್ ಹಲವರ ತುತ್ತಿನ ಚೀಲ ಕಸಿದುಕೊಂಡಿದೆ. ಹೇಗಿದ್ದ ಬದುಕು ಹೇಗಾಗೋಯ್ತು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇದಕ್ಕೊಂದು ಉದಾಹರಣೆ ಇಲ್ಲಿದೆ.

ಹೈದರಾಬಾದ್ ನವರಾದ ಬಿ ಭಾಸ್ಕರ್, 12 ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದವರು. ಕೊವಿಡ್ ನಿಂದಾಗಿ ಲಾಕ್‌ಡೌನ್ ಜಾರಿಯಾದ ನಂತರ ಕೆಲಸ ಕಳೆದುಕೊಂಡಿದ್ದಾರೆ. ಈಗ ಅನ್​ಲಾಕ್ ಆಗಿ ನಿಧಾನವಾಗಿ ಜನಜೀವನ ಸಹಜ ಸ್ಥಿತಿಯತ್ತ ಸಾಗುತ್ತಿದ್ದರೂ ಅವರು ಶಿಕ್ಷಕ ವೃತ್ತಿಯನ್ನು ಅದನ್ನು ಬಿಟ್ಟು ತಮ್ಮ ಸ್ವಂತ ಊರಾದ ವಾರಂಗಲ್ ಗ್ರಾಮದಲ್ಲಿ ರಸ್ತೆ ಬದಿ ಆಹಾರ ಮಳಿಗೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ.


ಬಿಎಸ್ಸಿ ಪದವೀಧರರಾದ ಭಾಸ್ಕರ್, ಶಿಕ್ಷಕ ವೃತ್ತಿಯಲ್ಲಿ ಯಾವುದೇ ಭದ್ರತೆ ಇಲ್ಲದಿರುವುದರಿಂದ ತಾನು ಮತ್ತೆ ಈ ವೃತ್ತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅವರು ತಮ್ಮ ಹಳ್ಳಿಗೆ ಹಿಂತಿರುಗಿ ಇಡೀ ಜೀವನವನ್ನು ಅಲ್ಲಿಯೇ ಕಳೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಮಿರ್ಚಿ-ಬಜ್ಜಿ ಸ್ಟಾಲ್ ನಿರುಪಯುಕ್ತವಾದರೂ ನಾನು ಬೇರೆ ಯಾವುದಾದರೂ ಕೆಲಸ ಮಾಡುತ್ತೇನೆ ಹೊರತು ನಾನು ನಗರಕ್ಕೆ ಮತ್ತು ಬೋಧನಾ ವೃತ್ತಿಗೆ ಹಿಂತಿರುಗಲು ಬಯಸುವುದಿಲ್ಲ ಎಂದಿದ್ದಾರೆ.


ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದರೂ, ಬಿಕ್ಕಟ್ಟಿನ ಸಂದರ್ಭದಲ್ಲಿ ನನ್ನ ಉದ್ಯೋಗ ನನ್ನ ರಕ್ಷಣೆಗೆ ಬರಲಿಲ್ಲ. ಭದ್ರತೆಯಿಲ್ಲದ ಉದ್ಯೋಗ ಮಾಡಬೇಡಿ ಎಂದು ನಾನು ಜನರಿಗೆ ಸಲಹೆ ನೀಡುತ್ತೇನೆ. ನಾನು ಬಜ್ಜಿ, ಕುರುಕಲು ತಿಂಡಿ ತಯಾರಿಸಿ ಮಾರಾಟ ಮಾಡಿ ದಿನಕ್ಕೆ 500-600 ರೂ. ಗಳನ್ನು ಗಳಿಸುತ್ತಿದ್ದೇನೆ ಎಂದಿದ್ದಾರೆ. ಈ ಮೊದಲು ಇವರು ಶಿಕ್ಷಕ ವೃತ್ತಿಯಲ್ಲಿದ್ದಾಗ ಮಾಸಿಕ 35,000 ರೂ.ಗಳಿಸುತ್ತಿದ್ದರು. ಶಿಕ್ಷಕ ವೃತ್ತಿಯನ್ನು ತ್ಯಜಿಸಲು ನಿರ್ಧರಿಸಿದವರಲ್ಲಿ ಭಾಸ್ಕರ್ ಒಬ್ಬರೇ ಅಲ್ಲ. ಈ ವೃತ್ತಿಯ ಹೊರತಾಗಿ ಬೇರೆ ಹಲವು ಉತ್ತಮ ಕೆಲಸದಲ್ಲಿದ್ದವರೂ ಇಂಥ ನಿರ್ಧಾರ ಕೈಗೊಂಡಿದ್ದಾರೆ. ಲಾಕ್​ಡೌನ್ ಜಾರಿಯಾಗಿ ಎಲ್ಲವೂ ಸ್ಥಗಿತಗೊಂಡಾಗ ಜೀವನೋಪಾಯಕ್ಕಾಗಿ ಕೃಷಿ ಅಥವಾ ಖಾಸಗಿ ಉದ್ಯೋಗಗಳತ್ತ ಮುಖ ಮಾಡಿದ್ದಾರೆ.

- Advertisement -

Latest News

error: Content is protected !!