
ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೆಚ್ ಎಂಟಿ ವಿಶೇಷ ಸರಣಿ ಕೈ ಗಡಿಯಾರಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಎರಡೂವರೆ ಕಿಲೋ ಮೀಟರ್ ಗೂ ಹೆಚ್ಚು ದೂರ ಸರತಿ ಸಾಲಿನಲ್ಲಿ ನಿಂತು ಹೆಚ್ ಎಂಟಿ ವಾಚ್ ಗಳನ್ನು ಖರೀದಿಸಿದ್ದಾರೆ.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್ಎಂಟಿ ಕಾರ್ಖಾನೆಯ ಆವರಣದ ಮಳಿಗೆಯ ಮುಂದೆ ಸರತಿ ಸಾಲಿನಲ್ಲಿ ನಿಂತು ಗ್ರಾಹಕರು ವಾಚ್ ಗಳನ್ನು ಖರೀದಿ ಮಾಡಿದರು. ಬೆಂಗಳೂರು ನಗರದಲ್ಲಿ ಮೂರು ಕಡೆ ಮಳಿಗೆಗಳಿದ್ದು, ಅದರಲ್ಲಿ ಜಾಲಹಳ್ಳಿ ಮತ್ತು ಮೇಕ್ರಿ ಸರ್ಕಲ್ ಸಮೀಪದಲ್ಲಿರುವ ಹೆಚ್ಎಂಟಿ ಭವನದ ಮಳಿಗೆಯಲ್ಲಿ ಇದ್ದ ಎಲ್ಲಾ ವಾಚ್ ಗಳು ಒಂದೇ ದಿನಕ್ಕೆ ಖಾಲಿಯಾಗಿವೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸೀಮಿತ ಸರಣಿಯ ವಿಶೇಷ ಗಡಿಯಾರಗಳನ್ನು ಬಿಡುಗಡೆ ಮಾಡಲಾಗಿತ್ತು. ತ್ರಿವರ್ಣ ಧ್ವಜ ಇರುವ ವಿಶೇಷ ವಾಚ್ ಗಳು ಹಾಗೂ ಗಂಡಭೇರುಂಡ ಕೈ ಗಡಿಯಾರಗಳು ಸಂಪೂರ್ಣವಾಗಿ ಇಂದು ಮಾರಾಟವಾಗಿವೆ.
ಮುಂದಿನ ತಿಂಗಳ ಅಂತ್ಯದ ವೇಳೆಗೆ ಮತ್ತಷ್ಟು ವಾಚ್ ಗಳನ್ನು ತಯಾರಿಸಿ ಬಿಡುಗಡೆ ಮಾಡಲಾಗುವುದು ಹಾಗೂ ಅತ್ಯುತ್ತಮ ಗುಣಮಟ್ಟದ ಆಟೋಮ್ಯಾಟಿಕ್ ವಾಚ್ ಗಳನ್ನು ಕೂಡ ಮಾರಾಟಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಹೆಚ್ಎಂಟಿ ಅಧ್ಯಕ್ಷ ಮತ್ತು ಎಂಡಿ ರಮೇಶ್ ತಿಳಿಸಿದ್ದಾರೆ.


