
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಾಗೂ ಅನುದಾನ ಬಳಕೆಯ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ಮುಖಾಮುಖಿ ಚರ್ಚೆ ನಡೆಸಲು ಸಿದ್ಧನಿದ್ದೇನೆ ಎಂದು ಪುತ್ತೂರು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಆದೇಶ್ ಶೆಟ್ಟಿ ಅವರು ಶಾಸಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
“ಶಾಸಕರೇ, ನಿಮ್ಮ ಮನೆಯ ಬಾಗಿಲಿನ ಮುಂದಿರುವ ಬೆಳ್ಳಿಪ್ಪಾಡಿ ರಸ್ತೆ ಹಾಗೂ ಮನೆಯ ಹಿಂದಿರುವ ಮಠಂತಬೆಟ್ಟು–ಪೆರ್ನೆ ರಸ್ತೆಗಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳೇನು? ಈ ರಸ್ತೆಗಳಿಗಾಗಿ ಮಂಜೂರಾದ ಅನುದಾನ, ಬಿಡುಗಡೆಯಾದ ಮೊತ್ತ ಹಾಗೂ ಕಾಮಗಾರಿಗಳ ಪ್ರಗತಿಯ ವಿವರಗಳನ್ನು ಸಾರ್ವಜನಿಕರ ಮುಂದಿಡಿ.
ಶಾಸಕರೇ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಎಷ್ಟು ಗ್ರಾಮಗಳಿವೆ ಎಂಬ ಸ್ಪಷ್ಟ ಅರಿವು ನಿಮಗಿದೆಯೇ? ಕ್ಷೇತ್ರದ ಪ್ರತಿಯೊಂದು ಗ್ರಾಮದ ಹೆಸರು, ಆ ಗ್ರಾಮಕ್ಕೆ ಮಂಜೂರಾದ ಅನುದಾನ, ಬಿಡುಗಡೆಯಾದ ಹಣ, ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅವುಗಳ ಪ್ರಸ್ತುತ ಸ್ಥಿತಿಯ ಸಂಪೂರ್ಣ ವಿವರಗಳನ್ನು ಅಧಿಕೃತ ದಾಖಲೆಗಳ ಸಮೇತ ತೆಗೆದುಕೊಂಡು ಬನ್ನಿ.
ಯಾವ ಗ್ರಾಮಕ್ಕೆ ಎಷ್ಟು ಅನುದಾನ ನೀಡಲಾಗಿದೆ? ಯಾವ ಕಾಮಗಾರಿಗೆ ಎಷ್ಟು ಹಣ ಖರ್ಚಾಗಿದೆ? ಎಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ? ಎಷ್ಟು ಕಾಮಗಾರಿಗಳು ಇನ್ನೂ ಬಾಕಿ ಉಳಿದಿವೆ? ಈ ಎಲ್ಲ ಪ್ರಶ್ನೆಗಳಿಗೆ ದಾಖಲೆಗಳ ಆಧಾರದಲ್ಲಿ ಉತ್ತರಿಸೋಣ.
ಉಪ್ಪಿನಂಗಡಿ ಭಾಗಕ್ಕೆ ₹345 ಕೋಟಿ ಅನುದಾನ ತಂದಿರುವುದಾಗಿ ವ್ಯಾಪಕ ಪ್ರಚಾರ ನಡೆಸಲಾಗಿದೆ. ಈ ಅನುದಾನದ ಯೋಜನಾವಾರು ವಿವರಗಳು, ವೆಚ್ಚ ಹಾಗೂ ಕಾಮಗಾರಿಗಳ ಪ್ರಸ್ತುತ ಸ್ಥಿತಿಯನ್ನು ಜನರಿಗೆ ತಿಳಿಸಬೇಕು.
ಹರೀಶ್ ಪೂಂಜಾ ಅವರ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕ ಹಕ್ಕಿದೆ? ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನಿಸುವ ಮೊದಲು ನಿಮ್ಮ ಕ್ಷೇತ್ರದಲ್ಲಿ ನೀವು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಲೆಕ್ಕವನ್ನು ಜನರ ಮುಂದಿಡಿ. ಹರೀಶ್ ಪೂಂಜಾ ಅವರ ಅಭಿವೃದ್ಧಿ ಸಾಧನೆಗಳ ಮುಂದೆ ನಿಮ್ಮ ಸಾಧನೆ ಏನೇನೂ ಅಲ್ಲ ಎಂಬುದು ನಮ್ಮ ನಿಲುವು. ಇದನ್ನು ಒಪ್ಪದಿದ್ದರೆ, ಇಬ್ಬರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳು ಹಾಗೂ ಅನುದಾನ ಬಳಕೆಯ ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬನ್ನಿ. ಜನರೇ ವಾಸ್ತವಾಂಶಗಳನ್ನು ಪರಿಶೀಲಿಸಿ ತೀರ್ಮಾನಿಸಲಿ.
ನಾನು ದಾಖಲೆಗಳೊಂದಿಗೆ ಪ್ರಶ್ನಿಸಲು ಸಿದ್ಧನಿದ್ದೇನೆ. ಶಾಸಕರು ಪ್ರತಿಯೊಂದು ಗ್ರಾಮಕ್ಕೂ ನೀಡಿರುವ ಅನುದಾನದ ಸಂಪೂರ್ಣ ದಾಖಲೆಗಳೊಂದಿಗೆ ಉತ್ತರಿಸಲು ಸಿದ್ಧರಿದ್ದಾರೆಯೇ?
ಚರ್ಚೆಯ ದಿನಾಂಕ, ಸಮಯ ಹಾಗೂ ಸ್ಥಳವನ್ನು ಶಾಸಕರೇ ನಿಗದಿಪಡಿಸಲಿ. ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೆ, ಒಬ್ಬರಿಗೊಬ್ಬರು ನೇರವಾಗಿ ಅಭಿವೃದ್ಧಿಯ ವಿಚಾರದಲ್ಲಿ ಚರ್ಚಿಸೋಣ.
ಈ ಚರ್ಚೆ ಕೇವಲ ರಾಜಕೀಯ ಆರೋಪ–ಪ್ರತ್ಯಾರೋಪಗಳಿಗೆ ಸೀಮಿತವಾಗದೆ, ಪುತ್ತೂರು ಕ್ಷೇತ್ರದ ಪ್ರತಿಯೊಂದು ಗ್ರಾಮದ ಅಭಿವೃದ್ಧಿ, ರಸ್ತೆಗಳ ಸ್ಥಿತಿಗತಿ, ಅನುದಾನದ ಬಳಕೆ ಹಾಗೂ ಕಾಮಗಾರಿಗಳ ವಾಸ್ತವ ಪ್ರಗತಿಯ ಕುರಿತು ನಡೆಯಲಿ.
ಶಾಸಕರೇ, ರೀಲ್ಸ್ಗಳಲ್ಲಿ ಅಭಿವೃದ್ಧಿಯ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕಿಂತ, ಪ್ರತಿಯೊಂದು ಗ್ರಾಮದ ಅಭಿವೃದ್ಧಿಯ ಲೆಕ್ಕಪತ್ರಗಳೊಂದಿಗೆ ಸಾರ್ವಜನಿಕ ವೇದಿಕೆಗೆ ಬನ್ನಿ. ಜನರ ಮುಂದೆಯೇ ನೇರವಾಗಿ ಚರ್ಚಿಸೋಣ.
ರೀಲ್ಸ್ಗಳಲ್ಲಿ ಅಲ್ಲ, ದಾಖಲೆಗಳೊಂದಿಗೆ ನೇರ ಚರ್ಚೆಗೆ ಬನ್ನಿ! ಬಹಿರಂಗ ಸವಾಲನ್ನು ಸ್ವೀಕರಿಸುತ್ತೀರಾ?” ಎಂದು ಆದೇಶ್ ಶೆಟ್ಟಿ ಪ್ರಶ್ನಿಸಿದ್ದಾರೆ.


