
ಮಂಗಳೂರು : ಕಳೆದ ಅಕ್ಟೋಬರ್ ಅಂತ್ಯದಲ್ಲಿ ಬಜಪೆ ಪರಿಸರದಿಂದ ನಾಪತ್ತೆಯಾಗಿದ್ದ 25 ವರ್ಷದ ಯುವಕನೊಬ್ಬ ಬರ್ಬರವಾಗಿ ಕೊಲೆಯಾಗಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ಹಳೆ ಏರ್ಪೋರ್ಟ್ ರಸ್ತೆಯ ನಿರ್ಜನ ಪ್ರದೇಶದ ಹೊಂಡವೊಂದರಲ್ಲಿ ಮಾನವನ ಮೂಳೆಯ ತುಂಡುಗಳು, ತಲೆಬುರುಡೆಯ ಚೂರುಗಳು ಹಾಗೂ ಬಟ್ಟೆಗಳು ಪತ್ತೆಯಾಗಿವೆ.
ಮೂಲತಃ ಉತ್ತರ ಪ್ರದೇಶದವರಾಗಿದ್ದು, ಬಜಪೆ ವಿಮಾನ ನಿಲ್ದಾಣದ ಬಳಿ ಇಟಾಚಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಮನೀಶ್ ಶರ್ಮಾ (25) ಮೃತಪಟ್ಟ ದುರ್ದೈವಿ ಎಂದು ಶಂಕಿಸಲಾಗಿದೆ. ಈ ಕುರಿತು ಮನೀಶ್ ಅವರ ಸಹೋದರ ಸೋನು ಶರ್ಮಾ ಬಜಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ: ಬಜಪೆಯ ಸೋಮಸುಂದರ್ ಎಂಬವರ ಬಳಿ ಇಟಾಚಿ ಚಾಲಕನಾಗಿದ್ದ ಮನೀಶ್ ಶರ್ಮಾ, ಅಕ್ಟೋಬರ್ 27ರಂದು ಸಂಜೆ ತನ್ನ ಸ್ನೇಹಿತ ಶ್ರವಣ್ ಎಂಬಾತನೊಂದಿಗೆ ಹೊರಗೆ ಹೋಗಿದ್ದವರು ನಾಪತ್ತೆಯಾಗಿದ್ದರು. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ಸಹೋದರ ಸೋನು ಶರ್ಮಾ ಅ. 30ರಂದು ಬೆಂಗಳೂರಿನಿಂದ ಬಜಪೆಗೆ ಬಂದು ಹುಡುಕಾಟ ನಡೆಸಿದ್ದರು. ಈ ವೇಳೆ ರೂಮಿನಲ್ಲಿದ್ದ ಬಿಹಾರ ಮೂಲದ ಮತ್ತೊಬ್ಬ ಆಪರೇಟರ್ ಬೈಜುಲಾಲ್, ಅ. 27ರಂದು ಶ್ರವಣ್ ಜೊತೆ ಬೈಕಿನಲ್ಲಿ ಹೋಗಿದ್ದ ಮನೀಶ್ ವಾಪಸ್ ಬರಲಿಲ್ಲ, ರಾತ್ರಿ ಒಬ್ಬನೇ ಬಂದ ಶ್ರವಣ್ ‘ಮನೀಶ್ ಊರಿಗೆ ಹೋಗಿದ್ದಾನೆ’ ಎಂದು ತಿಳಿಸಿದ್ದಾಗಿ ಹೇಳಿದ್ದಾನೆ.
ಬ್ಯಾಂಕ್ ಖಾತೆ ಮತ್ತು ಸಿಸಿಟಿವಿ ಸುಳಿವು: ಅನುಮಾನಗೊಂಡ ಸೋನು ಶರ್ಮಾ ತಮ್ಮ ತಂದೆಯ ಮೂಲಕ ಮನೀಶ್ ಬ್ಯಾಂಕ್ ಖಾತೆಯ ವಿವರ ಪರಿಶೀಲಿಸಿದಾಗ, ಅ. 27ರಂದು ರಾಜನ್ ಎಂಬವರ ಖಾತೆಗೆ ₹63,720 ವರ್ಗಾವಣೆಯಾಗಿರುವುದು ಮತ್ತು ಮರುದಿನ ಶ್ರವಣ್ ಸೂಚನೆಯಂತೆ ರಾಜನ್ ಆ ಹಣವನ್ನು ಶ್ರವಣ್ ಖಾತೆಗೆ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಅ. 27ರ ಸಂಜೆ 6.41ಕ್ಕೆ ಮನೀಶ್ ಮತ್ತು ಶ್ರವಣ್ ಒಟ್ಟಿಗೆ ಬೈಕಿನಲ್ಲಿ ತೆರಳುತ್ತಿರುವುದು ಹಾಗೂ ರಾತ್ರಿ 7.52ಕ್ಕೆ ಶ್ರವಣ್ ಒಬ್ಬನೇ ವಾಪಸ್ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಮೂಳೆ, ಬಟ್ಟೆ ಪತ್ತೆ: ನ. 13ರಂದು ಪೊಲೀಸರೊಂದಿಗೆ ಹುಡುಕಾಟ ನಡೆಸುತ್ತಿದ್ದಾಗ ಹಳೆ ಏರ್ಪೋರ್ಟ್ ರಸ್ತೆಯ ನಿರ್ಜನ ಪ್ರದೇಶದ ಕಚ್ಚಾ ರಸ್ತೆ ಬದಿಯ ಹೊಂಡವೊಂದರಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪರಿಶೀಲಿಸಲಾಯಿತು. ಅಲ್ಲಿ ಮಾನವನ ಮೂಳೆಗಳು, ತಲೆಬುರುಡೆಯ ಚೂರುಗಳು ಹಾಗೂ ಪ್ಯಾಂಟ್-ಶರ್ಟ್ ಪತ್ತೆಯಾಗಿದ್ದು, ಆ ಶರ್ಟ್ ತನ್ನ ತಮ್ಮ ಮನೀಶ್ ಅವರದ್ದೇ ಎಂದು ಸೋನು ಶರ್ಮಾ ಗುರುತಿಸಿದ್ದಾರೆ. ಹಣಕಾಸಿನ ವಿಚಾರ ಅಥವಾ ಇನ್ಯಾವುದೋ ದುರುದ್ದೇಶದಿಂದ ಸ್ನೇಹಿತ ಶ್ರವಣ್ನೇ ಮನೀಶ್ ಅವರನ್ನು ಕೊಲೆ ಮಾಡಿ, ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.


