
ಮಂಡ್ಯ: ಕೊಲೆಯಾಗಿದ್ದಾಳೆ ಎಂದು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದ ಮಹಿಳೆಯೊಬ್ಬಳು ಬರೋಬ್ಬರಿ ಏಳು ವರ್ಷಗಳ ನಂತರ ಜೀವಂತವಾಗಿ ಪತ್ತೆಯಾಗಿರುವ ಅಚ್ಚರಿಯ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯ ಈ ಗಂಭೀರ ವೈಫಲ್ಯದಿಂದಾಗಿ, ಮಾಡದ ತಪ್ಪಿಗೆ ಅಮಾಯಕ ಯುವಕನೊಬ್ಬ ಎರಡೂವರೆ ವರ್ಷಗಳ ಕಾಲ (30 ತಿಂಗಳು) ಜೈಲು ಶಿಕ್ಷೆ ಅನುಭವಿಸುವಂತಾಗಿದೆ.
ಪಾಂಡವಪುರ ಪಟ್ಟಣದಿಂದ 2019ರ ಜೂನ್ನಲ್ಲಿ ನಾಪತ್ತೆಯಾಗಿದ್ದ ಮಂಜು ಎನ್. (35) ಎಂಬುವವರೇ ಬುಧವಾರ ನಾಗಮಂಗಲ ತಾಲ್ಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಪತ್ತೆಯಾದ ಮಹಿಳೆ. ಚಾಮರಾಜನಗರ ಮೂಲದ ನಾಗೇಂದ್ರ ಎಂಬುವವರನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದ ಇವರು ಜೀವಂತವಾಗಿರುವುದು ದೃಢಪಟ್ಟಿದ್ದು, ಈ ಪ್ರಕರಣದಲ್ಲಿ ಕೊಲೆ ಆರೋಪಿಯಾಗಿ ಜೈಲು ಸೇರಿದ್ದ ರಾಗಿಮುದ್ದನಹಳ್ಳಿಯ ರಾಜೇಶ್ ಎಂ.ಆರ್. ಅಲಿಯಾಸ್ ಕಾಳ (36) ನಿರಾಳರಾಗಿದ್ದಾರೆ.
ಘಟನೆಯ ಹಿನ್ನೆಲೆ: 2019ರಲ್ಲಿ ಮಂಜು ನಾಪತ್ತೆಯಾದ ಕುರಿತು ಆಕೆಯ ತಂದೆ ನಾಗರಾಜು ಪಾಂಡವಪುರ ಠಾಣೆಯಲ್ಲಿ ದೂರು ನೀಡಿದ್ದರು. ಎರಡು ವರ್ಷಗಳ ಬಳಿಕ, ರಾಜೇಶ್ ಎಂಬುವವರು ಮಂಜು ಅವರನ್ನು ಕೊಲೆ ಮಾಡಿ ಕಾವೇರಿ ನದಿಗೆ ಎಸೆದಿದ್ದಾರೆ ಎಂದು ನಾಗರಾಜು ಮತ್ತೊಂದು ದೂರು ದಾಖಲಿಸಿದ್ದರು. ಮಂಜು ನಾಪತ್ತೆಯಾದ ದಿನ ಪಾಂಡವಪುರ ಬಸ್ ನಿಲ್ದಾಣದಲ್ಲಿ ಅಪರಿಚಿತರಾಗಿದ್ದ ರಾಜೇಶ್ ಅವರ ಮೊಬೈಲ್ ಪಡೆದು ಕೊನೆಯ ಕರೆ ಮಾಡಿದ್ದರು. ಇದೇ ಕಾಲ್ ರೆಕಾರ್ಡ್ (CDR) ಆಧರಿಸಿ 2021ರಲ್ಲಿ ಪೊಲೀಸರು ರಾಜೇಶ್ ಅವರನ್ನು ಬಂಧಿಸಿ, ಕೊಲೆ ಕೇಸ್ ದಾಖಲಿಸಿದ್ದರು. 30 ತಿಂಗಳು ಜೈಲುವಾಸ ಅನುಭವಿಸಿದ್ದ ರಾಜೇಶ್ 2024ರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದರು.
ಸತ್ಯ ಬಯಲಾಗಿದ್ದು ಹೇಗೆ? ರಾಜೇಶ್ ಪರ ವಕೀಲ ನಟೇಶ್ ಅವರಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಪರಿಶೀಲನೆ ನಡೆಸಿದಾಗ, ಮಾಯಿಗೋನಹಳ್ಳಿಯಲ್ಲಿ ಮಂಜು ಪತ್ತೆಯಾಗಿದ್ದಾರೆ. “ಮನೆಯವರು ನನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲು ಮುಂದಾಗಿದ್ದರಿಂದ ಮನೆ ಬಿಟ್ಟು ಹೋಗಿ ನಾಗೇಂದ್ರ ಅವರನ್ನು ಮದುವೆಯಾಗಿದ್ದೆ. ತಮಿಳುನಾಡಿನಲ್ಲಿ ನೆಲೆಸಿ, ಇತ್ತೀಚೆಗಷ್ಟೇ ಮಾಯಿಗೋನಹಳ್ಳಿಗೆ ಬಂದಿದ್ದೆವು. ನನಗೆ ರಾಜೇಶ್ ಯಾರೆಂದೇ ತಿಳಿದಿಲ್ಲ” ಎಂದು ಮಂಜು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಇವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.
ಪೊಲೀಸರ ವಿರುದ್ಧ ಗಂಭೀರ ಆರೋಪ, ತನಿಖೆಗೆ ಆದೇಶ: ಮಂಜು ಪತ್ತೆಯಾದ ಬೆನ್ನಲ್ಲೇ, ಅಂದಿನ ಪಾಂಡವಪುರ ಇನ್ಸ್ಪೆಕ್ಟರ್ ಪ್ರಭಾಕರ್ ವಿರುದ್ಧ ರಾಜೇಶ್ ಗಂಭೀರ ಆರೋಪ ಮಾಡಿದ್ದಾರೆ. ಸುಳ್ಳು ತಪ್ಪೊಪ್ಪಿಗೆ ಪಡೆಯಲು ಪೊಲೀಸರು ತೀವ್ರ ಹಲ್ಲೆ ನಡೆಸಿ, ಖಾಸಗಿ ಅಂಗಗಳಿಗೆ ವಿದ್ಯುತ್ ಶಾಕ್ ನೀಡಿದ್ದರು ಎಂದು ಕಣ್ಣೀರು ಹಾಕಿದ್ದಾರೆ. ರಾಜೇಶ್ ತಂದೆ ರಮೇಶ್ ಅವರು ಬಿಂಡಿಗನವಿಲೆ ಠಾಣೆಗೆ ತೆರಳಿ ಮಗನಿಗೆ ರಕ್ಷಣೆ ಹಾಗೂ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಹಿಂದಿನ ತನಿಖೆಯಲ್ಲಿ ನಡೆದಿರುವ ಗಂಭೀರ ಲೋಪಗಳ ಕುರಿತು ಸಮಗ್ರ ವಿಚಾರಣೆ ನಡೆಸಲು ಶ್ರೀರಂಗಪಟ್ಟಣ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಮಂಡ್ಯ ಎಸ್ಪಿ ಡಾ. ವಿ.ಜೆ. ಶೋಭಾರಾಣಿ ಆದೇಶಿಸಿದ್ದಾರೆ.


