
ಬೆಂಗಳೂರು: ಪ್ರಿಯಕರನ ಜೊತೆ ಸರಸಕ್ಕೆ ಅಡ್ಡಬಂದರೆಂಬ ಕಾರಣಕ್ಕೆ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಗಂಡ ಹಾಗೂ 5 ವರ್ಷದ ಹೆತ್ತ ಮಗುವನ್ನೇ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಸಮೀಪದ ಗುಡ್ಡೆ ಬಸವಪುರದಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ಅಭಿನಂದನ್ (33) ಹಾಗೂ ಆತನ 5 ವರ್ಷದ ಪುತ್ರ ಯದುವೀರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅಭಿನಂದನ್ ಪತ್ನಿ ಹರಿಣಿಯನ್ನು ಚಿಕ್ಕಬಾಣಾವರ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರ ವಿನಯ್‌ಗಾಗಿ ಬಲೆ ಬೀಸಿದ್ದಾರೆ.
ಏನಿದು ಘಟನೆ?: ಕೆಲವು ತಿಂಗಳ ಹಿಂದೆ ಬೇರೊಬ್ಬನ ಜೊತೆ ಓಡಿ ಹೋಗಿದ್ದ ಹರಿಣಿಯನ್ನು ಹಿರಿಯರು ಪಂಚಾಯಿತಿ ಮಾಡಿ ವಾಪಸ್ ಕರೆತಂದಿದ್ದರು. ಗಂಡ ಅಭಿನಂದನ್ ಆಕೆಯನ್ನು ಕ್ಷಮಿಸಿ ಮನೆಗೆ ಸೇರಿಸಿಕೊಂಡಿದ್ದ. ಆದರೆ ಹರಿಣಿ ತನ್ನ ಪ್ರಿಯಕರ ವಿನಯ್ ಜೊತೆಗಿನ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಳು.
ಸಾಕ್ಷಿ ಸಿಗಬಾರದೆಂದು ಭಾನುವಾರ ರಾತ್ರಿ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದ ಹರಿಣಿ, ಪ್ರಿಯಕರ ವಿನಯ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಇಬ್ಬರೂ ಸೇರಿ ಗಾಢ ನಿದ್ರೆಯಲ್ಲಿದ್ದ ಅಭಿನಂದನ್ ತಲೆಗೆ ಕಬ್ಬಿಣದ ಸೌಟ್‌ನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಈ ಕೃತ್ಯವನ್ನು 5 ವರ್ಷದ ಮಗ ಯದುವೀರ್ ನೋಡಿದ್ದರಿಂದ, ವಿಷಯ ಹೊರಬರುತ್ತದೆ ಎಂಬ ಭಯದಿಂದ ಆ ಹಾಲಿನಂತಹ ಮಗುವನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಸಾಕ್ಷ್ಯ ನಾಶಕ್ಕೆ ಯತ್ನ: ಕೊಲೆಯ ನಂತರ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು, ಗಂಡನ ರಕ್ತಸಿಕ್ತ ಬಟ್ಟೆಗಳನ್ನು ರಾತ್ರೋರಾತ್ರಿ ಒಗೆದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಳು. ಬೆಳಿಗ್ಗೆ “ಗಂಡ ನಿದ್ದೆಯಲ್ಲಿ ಮಗುವಿನ ಮೇಲೆ ಮಲಗಿದ್ದಕ್ಕೆ ಮಗು ಉಸಿರುಗಟ್ಟಿ ಸತ್ತಿದೆ, ಗಂಡನ ಕಿವಿಯಲ್ಲಿ ರಕ್ತ ಬರ್ತಿತ್ತು” ಎಂದು ಕಥೆ ಕಟ್ಟಿ ಸಹಜ ಸಾವು ಎಂದು ಬಿಂಬಿಸಲು ನಾಟಕವಾಡಿದ್ದಳು.
ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಾಣಾವರ ಪೊಲೀಸರಿಗೆ ಸಂಶಯ ಬಂದು ಹರಿಣಿಯನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಆಕೆ ಪ್ರಿಯಕರನ ಜೊತೆ ಸೇರಿ ನಡೆಸಿದ ಈ ಭೀಕರ ಕೃತ್ಯವನ್ನು ಎಳೆಎಳೆಯಾಗಿ ಒಪ್ಪಿಕೊಂಡಿದ್ದಾಳೆ


