Tuesday, August 18, 2026
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಬಿಎಂಎಸ್ ಬೃಹತ್ ಕಾರ್ಮಿಕ ಪ್ರತಿಭಟನೆ: ಕಾರ್ಮಿಕರ 11 ರಾಷ್ಟ್ರೀಯ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಮಂಗಳೂರಿನಲ್ಲಿ ಬಿಎಂಎಸ್ ಬೃಹತ್ ಕಾರ್ಮಿಕ ಪ್ರತಿಭಟನೆ: ಕಾರ್ಮಿಕರ 11 ರಾಷ್ಟ್ರೀಯ ಬೇಡಿಕೆಗಳ ಈಡೇರಿಕೆಗೆ ಆಗ್ರಹ

- Advertisement -
- Advertisement -

ಮಂಗಳೂರು: ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರಿನ ರಾಜಾಜಿ ಪಾರ್ಕ್‌ನಲ್ಲಿ ಆ.18 ರಂದು ಮಂಗಳವಾರ ಬೃಹತ್ ಕಾರ್ಮಿಕ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಕಾರ್ಮಿಕರ ದುಡಿಮೆಯೇ ದೇಶದ ಆರ್ಥಿಕ ಅಭಿವೃದ್ಧಿಯ ಪ್ರಮುಖ ಆಧಾರವಾಗಿದೆ. ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಉತ್ತಮ ವೇತನ ಹಾಗೂ ಗೌರವಯುತ ಜೀವನ ದೊರೆತಾಗ ಮಾತ್ರ ದೇಶದ ಅಭಿವೃದ್ಧಿ ಸಮಗ್ರವಾಗಲು ಸಾಧ್ಯ. ಕೇಂದ್ರ ಸರ್ಕಾರ ಕಾರ್ಮಿಕರ ಬೇಡಿಕೆಗಳನ್ನು ವಿಳಂಬ ಮಾಡದೆ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.ಆಶಾ, ಅಂಗನವಾಡಿ, ಅಕ್ಷರ ದಾಸೋಹ, ಎಚ್‌ಎನ್‌ಎಂ ಸೇರಿದಂತೆ ಯೋಜನಾ ಕಾರ್ಮಿಕರಿಗೆ ಗೌರವಧನ ಹಾಗೂ ಸಾಮಾಜಿಕ ಭದ್ರತೆ, ಗ್ರಾಚ್ಯುಟಿ, ಪಿಂಚಣಿ, ತುಟ್ಟಿ ಭತ್ಯೆ, ಬೋನಸ್, ವೈದ್ಯಕೀಯ ಸೌಲಭ್ಯ, ಇಎಸ್‌ಐ, ಪಿಎಫ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು. ಪಿಎಫ್ ಹಾಗೂ ಇಎಸ್‌ಐಗೆ ಸಂಬಂಧಿಸಿದ ವೇತನ ಮಿತಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಕಾನೂನುಬದ್ಧ ಸೌಲಭ್ಯ ಮತ್ತು ಉದ್ಯೋಗ ಭದ್ರತೆ ಕಲ್ಪಿಸಬೇಕು. ಬ್ಯಾಂಕ್ ನೌಕರರಿಗೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಬಿಎಂಎಸ್ ದ.ಕ. ಜಿಲ್ಲಾಧ್ಯಕ್ಷ ವಕೀಲ ಅನಿಲ್ ಕುಮಾರ್ ಯು. ಮಾತನಾಡಿ, “ನಾವು ಯಾರ ವಿರುದ್ಧವೂ ಹೋರಾಟ ಮಾಡುತ್ತಿಲ್ಲ. ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಒಗ್ಗೂಡಿದ್ದೇವೆ. ನಮ್ಮ ಹೋರಾಟ ಶಾಂತಿಯುತ ಹಾಗೂ ಪ್ರಜಾಪ್ರಭುತ್ವದ ಹೋರಾಟವಾಗಿದೆ” ಎಂದರು.

ಕಟ್ಟಡ ಕಾರ್ಮಿಕರಿಂದ ರಿಕ್ಷಾ ಚಾಲಕರವರೆಗೆ, ಆಶಾ–ಅಂಗನವಾಡಿಯಿಂದ ಬೀಡಿ ಹಾಗೂ ಮನೆ ಆಧಾರಿತ ಕಾರ್ಮಿಕರವರೆಗೆ, ರಬ್ಬರ್–ಕೃಷಿಯಿಂದ ಕೈಗಾರಿಕಾ ಮತ್ತು ಅಸಂಘಟಿತ ವಲಯದವರೆಗೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಕಾರ್ಮಿಕರು ಒಂದೇ ವೇದಿಕೆಯಲ್ಲಿ ಸೇರಿರುವುದು ಕಾರ್ಮಿಕ ಒಗ್ಗಟ್ಟಿನ ಪ್ರತೀಕವಾಗಿದೆ ಎಂದು ಹೇಳಿದರು.ನ್ಯಾಯಯುತ ವೇತನ, ಉದ್ಯೋಗ ಭದ್ರತೆ, ಆರೋಗ್ಯ ರಕ್ಷಣೆ ಹಾಗೂ ಸಾಮಾಜಿಕ ಭದ್ರತೆ ಕಾರ್ಮಿಕರ ಮೂಲಭೂತ ಅಗತ್ಯಗಳಾಗಿವೆ. ಎಂಆರ್‌ಪಿಎಲ್, ಎನ್‌ಎಂಪಿಟಿ, ಕೆಐಒಸಿಎಲ್ ಸೇರಿದಂತೆ ದೊಡ್ಡ ಕೈಗಾರಿಕೆಗಳ ಜೊತೆಗೆ ಸಣ್ಣ ಕೈಗಾರಿಕೆ, ಹೋಟೆಲ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳೂ ಬೆಳೆಯಬೇಕು. ಉದ್ಯಮ, ಉದ್ಯೋಗ ಹಾಗೂ ಕಾರ್ಮಿಕರ ಹಕ್ಕುಗಳು ಉಳಿಯಬೇಕು ಎಂಬುದು ಬಿಎಂಎಸ್‌ನ ನಿಲುವಾಗಿದೆ ಎಂದರು.ಕರ್ನಾಟಕದಲ್ಲಿ ಈಗಾಗಲೇ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಕಡಿಮೆ ಮಾಡಬಾರದು. ಬೆಲೆ ಏರಿಕೆ ಹಾಗೂ ಜೀವನ ವೆಚ್ಚವನ್ನು ಪರಿಗಣಿಸಿ ಕಾರ್ಮಿಕರ ವೇತನ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಆಗ್ರಹಿಸಿದರು.

ಬಿಎಂಎಸ್‌ನ ನಿಕಟ ಪೂರ್ವ ರಾಜ್ಯ ಉಪಾಧ್ಯಕ್ಷ ಭಗವಾನ್ ದಾಸ್ ಮಾತನಾಡಿ, ಸರ್ಕಾರಗಳು ಕಾರ್ಮಿಕರ ಸಮಸ್ಯೆಗಳಿಗೆ ಆದ್ಯತೆ ನೀಡಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಬಿಎಂಎಸ್‌ನ ವಿವಿಧ ಸಂಘಟನೆಗಳ ರಾಜ್ಯ ಹಾಗೂ ಜಿಲ್ಲಾ ಪ್ರಮುಖರಾದ ರೋಹಿತಾಶ್ವ, ವಸಂತ ಕುಮಾರ್ ಮಣಿಹಳ್ಳ, ನಳಿನಿ ಅಡ್ಯಾರ್, ಕುಮಾರನಾಥ ಶೆಟ್ಟಿ ಕಲ್ಮಂಜ, ತುಳಸಿ ದೇವರಾಜ್, ಡೀಲಾಕ್ಷಿ, ಸುಧೀಂದ್ರ, ಜಯರಾಜ್ ಸಾಲ್ಯಾನ್ ಹಾಗೂ ಗಿರಿಜಾ ಮತ್ತಿತರರು ಮಾತನಾಡಿ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಪ್ರತಿಭಟನೆಯ ಬಳಿಕ ಬಿಎಂಎಸ್ ವತಿಯಿಂದ ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ರಾಜು ಅವರ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೂ ಮನವಿ ಸಲ್ಲಿಸಲಾಯಿತು.ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಕಟ್ಟಡ, ಆಟೋ–ರಿಕ್ಷಾ, ಆಶಾ–ಅಂಗನವಾಡಿ, ಬೀಡಿ, ರಬ್ಬರ್–ಕೃಷಿ, ಕೈಗಾರಿಕೆ, ಸಾರಿಗೆ, ಅಸಂಘಟಿತ ಹಾಗೂ ಗುತ್ತಿಗೆ–ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡಿ ಕೇಂದ್ರದ ಗಮನಕ್ಕೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಬಿಎಂಎಸ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಸ್ವಾಗತಿಸಿದರು. ರಿಕ್ಷಾ ಕಾರ್ಮಿಕರ ಪ್ರಮುಖ ಉಮಾಶಂಕರ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಪ್ರಮುಖ ವಿಗ್ನೇಶ್ ಧನ್ಯವಾದ ಸಲ್ಲಿಸಿದರು.ಬ್ಯಾಂಕ್, ಎಂಆರ್‌ಪಿಎಲ್, ಎನ್‌ಎಂಪಿಟಿ, ಕುದುರೆಮುಖ, ಕಟ್ಟಡ, ಆಟೋ–ರಿಕ್ಷಾ, ಬೀಡಿ, ಆಶಾ–ಅಂಗನವಾಡಿ, ರಬ್ಬರ್–ಕೃಷಿ, ಕೈಗಾರಿಕೆ, ಸಾರಿಗೆ, ಗುತ್ತಿಗೆ–ಹೊರಗುತ್ತಿಗೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರು, ಬಿಎಂಎಸ್ ಪದಾಧಿಕಾರಿಗಳು ಹಾಗೂ ವಿವಿಧ ಯೂನಿಯನ್‌ಗಳ ಪ್ರಮುಖರು ಮತ್ತು ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- Advertisement -

Latest News

error: Content is protected !!