
ಬೆಳ್ತಂಗಡಿ: ಯಾವುದೇ ಪರವಾನಗಿ ಅಥವಾ ಇಲಾಖೆಯ ಅನುಮತಿ ಪಡೆಯದೆ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರ ಬೊಳ್ಳೂರುಬೈಲು ಎಂಬಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಆನಂದ ಎಂ. (ಕಾ&ಸು) ಅವರು ಠಾಣಾ ಸಿಬ್ಬಂದಿ ಹಾಗೂ ಪಂಚರೊಂದಿಗೆ ಇಲಾಖಾ ಜೀಪಿನಲ್ಲಿ ಕರ್ತವ್ಯದಲ್ಲಿದ್ದ ವೇಳೆ, ಕಡಿರುದ್ಯಾವರ ಕಡೆಯಿಂದ ಇಂದಬೆಟ್ಟು ಕಡೆಗೆ ಆ.18ರಂದು ಬೆಳಗ್ಗೆ 8.45ರ ಸುಮಾರಿಗೆ ಬರುತ್ತಿದ್ದ KA-21-B-3670 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿ ನೇತ್ರಾವತಿ ನದಿ ಸೇತುವೆ ಮೇಲೆ ಬರುತ್ತಿರುವುದು ಕಂಡುಬಂದಿದೆ. ಪೊಲೀಸ್ ಜೀಪನ್ನು ಕಂಡ ತಕ್ಷಣ ಟಿಪ್ಪರ್ ಚಾಲಕ ಲಾರಿಯನ್ನು ಸೇತುವೆ ಮೇಲೆ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಅನುಮಾನಗೊಂಡ ಪೊಲೀಸರು ಟಿಪ್ಪರ್ ಪರಿಶೀಲಿಸಿದಾಗ ಅದರಲ್ಲಿ ಮರಳು ತುಂಬಿರುವುದು ಪತ್ತೆಯಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಹಾಗೂ ಸರ್ಕಾರಕ್ಕೆ ರಾಜಸ್ವ ಪಾವತಿಸದೆ ಮರಳನ್ನು ಕಳವು ಮಾಡಿ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಟಿಪ್ಪರ್‌ನಲ್ಲಿದ್ದ ಮರಳಿನ ಅಂದಾಜು ಮೌಲ್ಯ 10,000 ಹಾಗೂ ಟಿಪ್ಪರ್‌ನ ಅಂದಾಜು ಮೌಲ್ಯ 3.50 ಲಕ್ಷ ಎಂದು ಅಂದಾಜಿಸಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪರಾರಿಯಾದ ಟಿಪ್ಪರ್ ಚಾಲಕನ ವಿರುದ್ಧ ಬಿಎನ್‌ಎಸ್ 2023ರ ಕಲಂ 303(2) ಹಾಗೂ MMDR Act ಮತ್ತು KMMCR 1994ರ ಸಂಬಂಧಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


