Friday, April 26, 2024
Homeಇತರಸತ್ತ ಹೆಣವ ಕಿತ್ತು ತಿನ್ನುವ ಹದ್ದುಗಳ ಸಾಮ್ರಾಜ್ಯದಲ್ಲಿ-ಗೋರಿಯೊಳಗಿನ ಆತ್ಮದ ಮೂಕರೋಧನ!

ಸತ್ತ ಹೆಣವ ಕಿತ್ತು ತಿನ್ನುವ ಹದ್ದುಗಳ ಸಾಮ್ರಾಜ್ಯದಲ್ಲಿ-ಗೋರಿಯೊಳಗಿನ ಆತ್ಮದ ಮೂಕರೋಧನ!

spot_img
- Advertisement -
- Advertisement -

ಸಮಾಜ, ಕಾಲ, ಬದುಕು ಆಧುನಿಕತೆಯ ಭರಕ್ಕೆ ಸಿಕ್ಕಿ ಎಲ್ಲೆ ಮೀರಿ ಬೆಳೆದದ್ದು ಒಪ್ಪಿಕೊಳ್ಳಬೇಕಾದ ವಾಸ್ತವ. ಆದರೆ ಬೆಳವಣಿಗೆಯ ಭರಕ್ಕೆ ಆಕರ್ಷಿತಗೊಂಡು ಮುಂದೆ ಹೋಗುತ್ತಿದ್ದೇನೆ ಎಂದು ಭ್ರಮಿಸಿ ಹಲವು ವಿಷಯ,ವಸ್ತು, ವ್ಯಕ್ತಿತ್ವಗಳು ಪಾತಳಕ್ಕೆ ಇಳಿದುಬಿಟ್ಟಿದ್ದವು. ಆಧುನಿಕತೆಯ ಈ ಘಟ್ಟದಲ್ಲಿ ಈ ತೆರನಾಗಿ ನಲುಗಿಹೋದ ವ್ಯಕ್ತಿತ್ವ ಹೆಣ್ಣು.

ಮಹಾಭಾರತದಲ್ಲಿ ಅರ್ಜುನ ಕಲಿಯುಗದ ಬಗ್ಗೆ ಹೇಳುವಾಗ “ಅದು ಘೋರ ಯುಗ ಅಲ್ಲಿ ನ್ಯಾಯಕ್ಕೆ ಬೆಲೆ ಕಡಿಮೆ ಮತ್ತು ಆ ಯುಗದಲ್ಲಿ ಹೆಣ್ಣು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಾಳೆ”ಎಂದು ನುಡಿಯುತ್ತಾನೆ. ಇಂದಿನ ಈ ದಿನಗಳಿಗೆ ಹೋಲಿಸಿ ನೋಡಿದಾಗ ಆತನ ಮಾತುಗಳು ಅಕ್ಷರಶಃ ಸತ್ಯ. ಕಳೆದ ಹಲವು ದಿನಗಳಿಂದ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ಹೆಣ್ಣು ಹೆತ್ತ ಹೃದಯಗಳನ್ನ ಹಿಂಡಿ ಹಿಪ್ಪೆ ಮಾಡಿವೆ.

ಮನೆಯ ಕಣ್ಮಣಿಯಾಗಿದ್ದ ಮಗಳನ್ನ ಯಾರೋ ಕಾಮುಕರು ತಮ್ಮ ತೃಷೆ ತಣಿಸಿ ಎಲ್ಲ್ಲೋ ವಿವಸ್ತ್ರವಾಗಿ ಎಸೆದು ಹೋದಾಗ ಆ ತಂದೆ ತಾಯಿಯ ನೋವು, ಒಡಹುಟ್ಟಿದವರ ಅಳಲು ಊಹಿಸಿಕೊಳ್ಳಲು ಸಾಧ್ಯವೇ? ಇನ್ನು ಆ ಮುಗ್ಧಜೀವ ಸಾವಿನ ಹಂತದಲ್ಲಿ ಪಟ್ಟಿರಬಹುದಾದ ವೇದನೆ ಇವೆಲ್ಲಾ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುವ ವಿಷಯಗಳು. ಅಲ್ಲದೆ ಸಾವಿನ ನಂತರ ರಾಜಕೀಯ ಪಕ್ಷಗಳ ಕೆಸರೆರಚಾಟ, ನ್ಯಾಯದ ಹೆಸರಿನಲ್ಲಿ ಆ ಇಡೀ ಪರಿವಾರವನ್ನ ಬೆತ್ತಲಾಗಿಸಿದಂತ ಪರಿಸ್ಥಿತಿ ಎದುರಿಸಿದ ಹಲವು ಕುಟುಂಬಗಳು ನಮ್ಮ ನಿಮ್ಮ ಮಧ್ಯೆ ಇವೆ.


ಆರಂಭದಲ್ಲಿ ನ್ಯಾಯಕ್ಕಾಗಿ ಹೋರಾಡಿ ಕೊನೆಗೆ ಯಾರೋ ಹೆಸರು ಮಾಡಿಕೊಳ್ಳಲು ನಾವು ವಸ್ತುವಾಗುತ್ತಿದ್ದೇವೆ ಎಂದು ತಿಳಿದು ಸಮಾಜದ ನಾಟಕೀಯ ಬಲೆಯಿಂದ ದೂರವಾಗಿ ಎಲ್ಲೋ ಅವುಡುಗಚ್ಚಿ ಬದುಕುವ ಆ ಪರಿವಾರಗಳ ಪಾಡು ಶತ್ರುವಿಗೂ ಬೇಡ. ಆದರೆ ಪ್ರತಿ ಅತ್ಯಾಚಾರಿಗೂ ನೀಡಲಾಗುವ ಶಿಕ್ಷೆಗೆ ಮಿತಿ ಎನ್ನುವುದಿದೆ. ಆದರೆ ಬಲಿಯಾದ ಯುವತಿಯ ಪರಿವಾರಕ್ಕೆ ನಿರಂತರ ಶಿಕ್ಷೆಯೇ ಗತಿ. ದೇಶದಲ್ಲಿರುವ ಕಾನೂನು ವ್ಯವಸ್ಥೆಯ ಮೃಧು ಧೋರಣೆ ಗಟ್ಟಿಯಾಗದ ಹೊರತು ಸ್ತ್ರೀ ಶೋಷಣೆ ಕೊನೆಗಾಣುವುದಿಲ್ಲ.

ಇನ್ನು ಸಮಾಜದ ಮುಖ್ಯವಾಹಿನಿಗೆ ಬಂದು ಚರ್ಚೆಗೊಳಗಾಗಿರುವ ಪ್ರಕರಣಗಳಿಗಿಂತ ಮುಚ್ಚಿ ಹೋದ ಪ್ರಕರಣಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಿದೆ. ಮಾಡರ್ನ್ ಬದುಕಿನಲ್ಲಿ ಮಾಡರ್ನ್ ಶೋಷಣೆಗಳು ಹೆಣ್ಣನ್ನು ಭಾದಿಸುತ್ತಿವೆ. ವರದಕ್ಷಿಣೆ , ಸತಿ ಸಹಗಮನ, ದೇವದಾಸಿ ಪದ್ಧತಿ ಅಳಿದರೂ ಮಾನಸಿಕವಾಗಿ ಎಷ್ಟೋ ಹೆಣ್ಣುಮಕ್ಕಳು ಗಂಡನ ಮನೆಯವರ ಹಿಂಸೆಗೆ ಪ್ರತಿದಿನ ದಹನ ವಾಗುತ್ತಲೇ ಇದ್ದಾರೆ. ಹಣದ ದಾಹಕ್ಕೆ ಹೆಣ್ಣು ಹೊರಲಾರದ ನೊಗ ಹೊತ್ತು ಇತರರಿಗಾಗಿ ಗಾಣದೆತ್ತಿನಂತೆ ದುಡಿವ ವಾತಾವರಣವೂ ಇಲ್ಲದಿಲ್ಲ.


ಮರ್ಯಾದೆಗೆ ಅಂಜುವ ಮನಸ್ಸಿನ ಮುಗ್ಧತೆ ಅವಳ ನೋವನ್ನ ಹೊರಹಾಕಲು ಅವಕಾಶ ಕೊಡುತ್ತಿಲ್ಲ. ಬಾಗಿದವನಿಗೆ ಗುದ್ದು ಜಾಸ್ತಿ ಎಂಬಂತಾಗಿದೆ ಹೆಣ್ಣಿನ ಬದುಕು. ಶಿಕ್ಷಣ ಈ ಎಲ್ಲಾ ಪಿಡುಗಿನಿಂದ ಮುಕ್ತಿ ನೀಡಬಹುದು ಎನ್ನಲೂ ಆಗದು. ಕಾರಣ ಶೋಷಣೆಗೆ ಬಲಿಯಾದ ಮತ್ತು ನೀಡುತ್ತಿರುವ ಈರ್ವರು ಸಭ್ಯ,ಸುಸಂಸ್ಕೃತ ಶಿಕ್ಷಿತರು ಆಗಿರುವ ಉದಾಹರಣೆಯೂ ಇದೆ. ಬಹುಷಃ ಮಲೀನ ಹೃದಯ ಮತ್ತು ಅಸ್ವಸ್ಥ ಮೆದುಳಿಗೆ ಚಿಕಿತ್ಸೆ ದೊರೆತರೆ ಬದಲಾವಣೆಯ ದಾರಿಯಲ್ಲಿ ನಡೆಯಲಾಗದಿದ್ದರೂ ಕನಿಷ್ಠ ಆ ಕುರಿತು ಯೋಚಿಸಬಹುದು

-ಪೂಜಾ ಪ್ರಶಾಂತ್ ಶೆಟ್ಟಿ .ಧರ್ಮಸ್ಥಳ

- Advertisement -
spot_img

Latest News

error: Content is protected !!