ಟೋಕಿಯೊ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿಶ್ವ ನಂ.7 ರ್ಯಾಂಕ್ನ ಸಿಂಧು, 13ನೇ ಶ್ರೇಯಾಂಕಿತೆ ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಟ್ ವಿರುದ್ಧ 21-15 21-13ರ ಅಂತರದ ಗೆಲುವು ದಾಖಲಿಸಿದ್ದಾರೆ.
ಮೊದಲ ಸೆಟ್ನಲ್ಲಿ ಸಿಂಧು ಆರಂಭದಿಂದಲೇ ಎಚ್ಚರಿಕೆಯ ಆಟ ಪ್ರದರ್ಶಿಸಿದ್ದು, ಕ್ರಮೇಣ ಆಟಕ್ಕೆ ಮುಂದಾದ ಸಿಂಧು ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿದರು. ಒಂದು ಹಂತದಲ್ಲಿ ಸಿಂಧು 16-15 ಅಂಕಗಳ ಮುನ್ನಡೆಯಲ್ಲಿದ್ದರು. ಇದಾದ ಬಳಿಕ ಸತತ 6 ಅಂಕಗಳನ್ನು ಗಳಿಸುವ ಮೂಲಕ ಮೊದಲ ಗೇಮ್ ಅನ್ನು 21-15 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.ಇನ್ನು ಎರಡನೇ ಸೆಟ್ನಲ್ಲಿ ಸಿಂಧು ಆರಂಭದಲ್ಲೇ 5-0 ಮುನ್ನಡೆ ಸಾಧಿಸುವ ಮೂಲಕ ಉತ್ತಮ ಆರಂಭವನ್ನು ಪಡೆದರು.
ಆ ಬಳಿಕವೂ ಡೆನ್ಮಾರ್ಕ್ ಆಟಗಾರ್ತಿ ಮೇಲುಗೈ ಸಾಧಿಸದಂತೆ ನೋಡಿಕೊಳ್ಳುವಲ್ಲಿ ಹೈದರಾಬಾದ್ ಮೂಲದ ಸಿಂಧು ಯಶಸ್ವಿಯಾದರು. ಅಂತಿಮವಾಗಿ ಸಿಂಧು 21-13 ಅಂಕಗಳ ಅಂತರದಲ್ಲಿ ಎರಡನೇ ಸೆಟ್ ಗೆಲ್ಲುವ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು.
ಅಮೋಘ ಆಟ ಪ್ರದರ್ಶಿಸಿದ ಸಿಂಧು 41 ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡರು.26 ವರ್ಷದ ಸಿಂಧು ಜಪಾನ್ನ ಅಕಾನೆ ಯಮಗುಚಿ ಹಾಗೂ ಕೊರಿಯಾದ ಕಿಮ್ ಗಾಯೂನ್ ನಡುವಣ ಪಂದ್ಯ ವಿಜೇತರ ಸವಾಲನ್ನು ಎದುರಿಸಲಿದ್ದಾರೆ.