Saturday, October 17, 2026
Homeಪ್ರಮುಖ-ಸುದ್ದಿನೂಡಲ್ಸ್‌ ತಿಂದು ಮಲಗಿದ್ದ ಒಂದೇ ಕುಟುಂಬದ ಐವರು ಸಾವು

ನೂಡಲ್ಸ್‌ ತಿಂದು ಮಲಗಿದ್ದ ಒಂದೇ ಕುಟುಂಬದ ಐವರು ಸಾವು

- Advertisement -
- Advertisement -

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ನಾಗ್ಲಾ ಶ್ರೀ ಪಾದಮ್ ಗ್ರಾಮದಲ್ಲಿ ದಂಪತಿ ಹಾಗೂ ಅವರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶನಿವಾರ (ಅ.17) ಬೆಳಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತರನ್ನು ಮಹೇಶ್ (37), ಅವರ ಪತ್ನಿ ಲಲಿತಾ (35), ಪುತ್ರರಾದ ಸಾಕ್ಷತ್ (3) ಮತ್ತು ಲಡ್ಡು (11), ಪುತ್ರಿ ಮಿಷ್ಟಿ (7) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಕುಟುಂಬದವರು ಚಹಾ ಮತ್ತು ನೂಡಲ್ಸ್ ಸೇವಿಸಿದ್ದರು ಎನ್ನಲಾಗಿದ್ದು, ಆಹಾರ ವಿಷಬಾಧೆಯಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಸಾವಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.

ಪೊಲೀಸರ ಪ್ರಕಾರ, ಶನಿವಾರ ಬೆಳಗ್ಗೆ ರಾಬುಪುರ ಪೊಲೀಸ್ ಠಾಣೆಗೆ ಘಟನೆಯ ಕುರಿತು ಮಾಹಿತಿ ಲಭಿಸಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಹಿರಿಯ ಅಧಿಕಾರಿಗಳು, ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಆಹಾರ ಸುರಕ್ಷತಾ ಇಲಾಖೆಯ ತಂಡ ಪರಿಶೀಲನೆ ನಡೆಸಿದೆ.

ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳದಿಂದ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಸ್ಥಳೀಯ ನಿವಾಸಿಗಳು ಹಾಗೂ ಮಹೇಶ್ ಅವರ ತಾಯಿ ನೀಡಿರುವ ಮಾಹಿತಿಯ ಪ್ರಕಾರ, ಕುಟುಂಬದವರು ಶುಕ್ರವಾರ ರಾತ್ರಿ ನೂಡಲ್ಸ್ ಸೇವಿಸಿದ್ದರು. ಮರುದಿನ ಬೆಳಗ್ಗೆ ಐವರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

- Advertisement -

Latest News

error: Content is protected !!