ಮಂಗಳೂರು: ಹೌತಿ ಬಂಡುಕೋರರ ತೀವ್ರ ದಾಳಿಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಚಿಕ್ಕಮಗಳೂರು ಭಾಗದಿಂದ ಉಮ್ರಾ ಯಾತ್ರೆಗೆ ತೆರಳಿದ್ದ ಸುಮಾರು 500 ಮಂದಿ ಯಾತ್ರಾರ್ಥಿಗಳು ಸೌದಿ ಅರೇಬಿಯಾದಲ್ಲಿ ಅತಂತ್ರರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ಮೂಲಕ ಸೆಪ್ಟೆಂಬರ್ 20ರ ಬಳಿಕ ಪವಿತ್ರ ಮಕ್ಕಾ ಮತ್ತು ಮದೀನಾಕ್ಕೆ ಉಮ್ರಾ ಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳು, ವಿಮಾನ ಸೇವೆ ಸ್ತಬ್ಧಗೊಂಡಿದ್ದರಿಂದ ತವರಿಗೆ ಮರಳಲು ಪರದಾಡುವಂತಾಗಿದೆ.
ಮಕ್ಕಾ ಮತ್ತು ಮದೀನಾದಲ್ಲಿ ಯಾತ್ರಾರ್ಥಿಗಳು ಉಳಿದುಕೊಂಡಿದ್ದ ಹೊಟೇಲ್ಗಳ 15 ದಿನಗಳ ಬುಕಿಂಗ್ ಅವಧಿ ಈಗಾಗಲೇ ಮುಗಿದಿದೆ. ಆದರೂ, ಅಲ್ಲಿನ ಹೋಟೆಲ್ ಆಡಳಿತ ಮಂಡಳಿಯು ಮಾನವೀಯ ದೃಷ್ಟಿಯಿಂದ ಅವರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಅವಕಾಶ ನೀಡಿದೆ. ಆದರೆ, ವಾಪಸ್ ಬರದ ಕಾರಣ ಯಾತ್ರಾರ್ಥಿಗಳು ತೀವ್ರ ಅತಂತ್ರ ಸ್ಥಿತಿಯಲ್ಲಿದ್ದು, ಕೂಡಲೇ ಅವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ ತುರ್ತು ನೆರವು ನೀಡಬೇಕು ಎಂದು ದಕ್ಷಿಣ ಕನ್ನಡ ಹಜ್ ಉಮ್ರಾ ಪ್ರೈವೇಟ್ ಟೂರ್ ಆರ್ಗನೈಸರ್ಸ್ ಅಸೋಸಿಯೇಷನ್ ಮನವಿ ಮಾಡಿದೆ.
ವಿಮಾನಗಳು ರದ್ದಾಗಿರುವುದರಿಂದ ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿಯಾಗುವ ಪ್ರಕ್ರಿಯೆ ವಿಳಂಬವಾಗಲಿದೆ. ಅಲ್ಲದೆ, ಯಾತ್ರಾರ್ಥಿಗಳ ವಸತಿ ವ್ಯವಸ್ಥೆಗಾಗಿ ಟ್ರಾವೆಲ್ ಸಂಸ್ಥೆಗಳು ಮುಂಗಡವಾಗಿ ಹೋಟೆಲ್ಗಳಿಗೆ ಪಾವತಿಸಿರುವ ಹಣವನ್ನು ಮರುಪಡೆಯುವುದು ಕಷ್ಟವಾಗಿದ್ದು, ಇದರಿಂದ ಟೂರ್ ಸಂಸ್ಥೆಗಳು ಕೂಡ ತೀವ್ರ ಆರ್ಥಿಕ ನಷ್ಟವನ್ನು ಎದುರಿಸುವಂತಾಗಿದೆ ಎಂದು ಅಸೋಸಿಯೇಷನ್ನ ಉಪಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


