Tuesday, July 21, 2026
Homeಅಪರಾಧಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವಸತಿ ಶಾಲಾ ಪ್ರಾಂಶುಪಾಲ!

ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವಸತಿ ಶಾಲಾ ಪ್ರಾಂಶುಪಾಲ!

- Advertisement -
- Advertisement -

ಶಿವಮೊಗ್ಗ: 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ದಾಖಲಾತಿಗಾಗಿ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ಹಣ ಪಡೆಯುತ್ತಿದ್ದ ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಭದ್ರಾವತಿ ತಾಲೂಕಿನ ಹುಣಸೆಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿಯನ್ನು ಪ್ರಾಂಶುಪಾಲ ನಾಮದೇವ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಭದ್ರಾವತಿ ತಾಲೂಕಿನ ತಿಪ್ಲಾಪುರ ಕ್ಯಾಂಪ್ ನಿವಾಸಿಯಾದ ಮೇಘರಾಜ್ ಸಿ. ಎಂಬುವವರು ತಮ್ಮ ಮಗಳನ್ನು 7ನೇ ತರಗತಿಗೆ ಸೇರಿಸಲು ಮುಂದಾಗಿದ್ದರು. ಈ ವೇಳೆ ಪ್ರವೇಶಾತಿ (ಅಡ್ಮಿಷನ್) ನೀಡಲು ಪ್ರಿನ್ಸಿಪಾಲ್ ನಾಮದೇವ್ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟೇ ಅಲ್ಲದೆ, ಶಾಲೆಗೆ ಡ್ರಮ್ ಸೆಟ್ ಕೊಡಿಸುವ ನೆಪದಲ್ಲಿಯೂ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಪ್ರಾಂಶುಪಾಲರ ಲಂಚದ ಬೇಡಿಕೆಯಿಂದ ಬೇಸತ್ತ ಮೇಘರಾಜ್ ಅವರು ಶಿವಮೊಗ್ಗದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಇಂದು ವಸತಿ ಶಾಲೆಯಲ್ಲೇ ಮೊದಲ ಕಂತಿನ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆರೋಪಿ ನಾಮದೇವ್‌ನನ್ನು ಕೆಂಗೆಣ್ಣಾಗಿ ಹಿಡಿದಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಹಾಗೂ ಇನ್ಸ್‌ಪೆಕ್ಟರ್ ರುದ್ರೇಶ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!