ಮಧ್ಯಪ್ರದೇಶ: ತನ್ನ ಯಜಮಾನನ ಮೃತದೇಹದೊಂದಿಗೆ ಶ್ವಾನವೊಂದು ಇಡೀ ರಾತ್ರಿ ಕೂತಿದ್ದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ಘಟನೆಯು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬದೋರಾ ಗ್ರಾಮದಲ್ಲಿ ನಡೆದಿದ್ದು, ಶ್ವಾನದ ಯಜಮಾನ ಪ್ರಜಾಪತಿ (40) ಸಾವನ್ನಪ್ಪಿದ್ದರು. ಈ ದುರಂತದ ವಿಚಾರ ಕುಟುಂಬದವರಿಗೆ ತಿಳಿಯುತ್ತಿದ್ದಂತೆ ಶವವನ್ನು ಕೆಳಗಿಳಿಸಿದ್ದು, ರಾತ್ರಿಯಿಡೀ ಮೃತದೇಹದ ಪಕ್ಕದಲ್ಲೇ ಸಾಕು ನಾಯಿಯು ಕುಳಿತಿತ್ತು. ಸಂಬಂಧಿಕರು ಅದನ್ನು ಅಲ್ಲಿಂದ ಎಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ ಸಹ ಶ್ವಾನ ಮಾತ್ರ ತನ್ನ ಯಜಮಾನನ ಮೃತದೇಹವನ್ನು ಬಿಟ್ಟು ಕದಲಿರಲಿಲ್ಲ. ಮರುದಿನ ಬೆಳಿಗ್ಗೆ ಶವಪರೀಕ್ಷೆಗಾಗಿ ಮೃತದೇಹವನ್ನು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಕೊಂಡೊಯ್ಯುವಾಗಲೂ ಸುಮಾರು 4 ಕಿಲೋ ಮೀಟರ್ ದೂರದವರೆಗೆ ಹಿಂಬಾಲಿಸಿದೆ ಎನ್ನಲಾಗಿದೆ.
ಅಂತಿಮವಾಗಿ ಶವದ ಅಂತ್ಯಕ್ರಿಯೆ ನಡೆಯುವವರೆಗೂ ಸ್ಮಶಾನದಲ್ಲಿದ್ದು ತನ್ನ ಯಜಮಾನನಿಗೆ ಅಂತಿಮ ನಮನ ಸಲ್ಲಿಸಿತು ಎಂದು ತಿಳಿದು ಬಂದಿದೆ. ಇದೀಗ ಶ್ವಾನ ಪ್ರೀತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.


