ಜೈಲರ್ ವಿಲನ್ ಖ್ಯಾತಿಯ ನಟ ವಿನಾಯಕನ್ ರವರನ್ನು ಕೇರಳದ ಎರ್ನಾಕುಲಂ ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಂಠಪೂರ್ತಿ ಕುಡಿದು ಸಾರ್ವಜನಿಕವಾಗಿ ಅಡಚಣೆ ಉಂಟುಮಾಡಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ. ಮದ್ಯದ ಅಮಲಿನಲ್ಲಿದ್ದ ವಿನಾಯಕನ್ ಠಾಣೆಯ ಕಾರ್ಯಾಚರಣೆಗೂ ಅಡ್ಡಿಪಡಿಸಿದ್ದು, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನಾಯಕನ್ ತಾವು ತಂಗಿದ್ದ ಅಪಾರ್ಟ್ ಮೆಂಟ್ ನಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿದ್ದಾರೆ. ಇನ್ನು ಠಾಣೆಯಲ್ಲೂ ಕುಡಿದ ಅಮಲಿನಲ್ಲಿ ವಿನಾಯಕನ್ ರಂಪಾಟ ಮಾಡಿದ್ದು, ಅವಾಚ್ಯ ಶಬ್ದಗಳಿಂದ ಅಧಿಕಾರಿಗಳನ್ನು ನಿಂದಿಸಿದ್ದಾರೆ ಎನ್ನಲಾಗಿದೆ.
ವಿನಾಯಕನ ಬಂಧನದ ಬಳಿಕ ಅವರನ್ನು ಅಲ್ಲೊಹಾಲ್ ಪರೀಕ್ಷೆಗಾಗಿ ಎರ್ನಾಕುಲಂ ಜನರಲ್ ಅಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಅವರ ವಿರುದ್ಧ ದೂರು ದಾಖಲಿಸಿ, ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ.
ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ಮುಖ್ಯ ಖಳನಾಯಕನಾಗಿ ನಟಿಸಿದ್ದ ಅವರು ಖಳನಾಯಕ ಪಾತ್ರದಲ್ಲಿಯೇ ವೀಕ್ಷಕರ ಮನಗೆದ್ದಿದ್ದರು.


