
ಬೆಳ್ತಂಗಡಿ : ಕುವೆಟ್ಟು ಗ್ರಾಮದ ಶಕ್ತಿನಗರದ ಎಸ್. ಎಲ್. ವಿ ಇ ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್ ನಲ್ಲಿ 01-07-2026 ರಂದು ನಡೆದ ಕಳ್ಳತನ ಪ್ರಕರಣ ಸಂಬಂಧ ಸಾವನ್ನಪ್ಪಿದ ಮುಸ್ತಾಕ್ ಜೊತೆಯಲ್ಲಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದ ನಿವಾಸಿ ಇಸುಬು ಬ್ಯಾರಿ ಮಗನಾದ ಇಬ್ರಾಹಿಂ ಲತೀಫ್(36) ಎಂಬಾತನನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ನೇತೃತ್ವದ ತಂಡ ಕಾಶಿಪಟ್ಣದಲ್ಲಿ ಜು.14 ರಂದು ಸಂಜೆ 3 ಗಂಟೆಗೆ ಬಂಧಿಸಿ ವಿಚಾರಣೆ ನಡೆಸಿ ಜು.15 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು.ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರ ಎಂಬಲ್ಲಿರುವ ಎಸ್.ಎಲ್.ವಿ ಇ ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್ ನಲ್ಲಿ 01-07-2026 ರಂದು ರಿಸೀವಿಂಗ್ ಸ್ಟೇಷನ್ ಕಂಪೌಂಡ್ ನ ಒಳಗೆ ತೊಂಡೆಕಾಯಿ ಬೆಳೆಯಲು ಚಪ್ಪರಕ್ಕೆ ಹಾಕಿದ್ದ ಜಿಐ ಸ್ಟೀಲ್ ವಯರ್ ಗೆ ಅಪರಿಚಿತ ಗಂಡಸು ಕುತ್ತಿಗೆಗೆ ವಯರ್ ಸಿಕ್ಕಿಕೊಂಡು ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ 35/2026 ರಂತೆ ಪ್ರಕರಣ ದಾಖಲಾಗಿರುತ್ತದೆ. ಬಳಿಕ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿ ಹೆಸರು ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಜನತಾ ಕಲೋನಿ ನಿವಾಸಿ ಶರೀಫ್.ಕೆ ಮಗ ಮುಸ್ತಾಕ್(27) ಎಂಬುದಾಗಿ ತಿಳಿದುಬಂದಿದ್ದು, ಪ್ರಕರಣದಲ್ಲಿ ಮೃತಪಟ್ಟ ಮುಸ್ತಾಕ್ ನ ಮೃತದೇಹ ಪತ್ತೆಯಾದ ಸ್ಥಳದ ಹತ್ತಿರ ರಿಸಿವಿಂಗ್ ಸ್ಟೇಷನ್ ನ ಕಂಪೌಂಡ್ ಒಳಗೆ ಉಪಯೋಗಿಸಿ ಉಳಿದ ಹಳೆಯ ಅಲ್ಯೂಮಿನಿಯಂ ವಯರ್ ತುಂಡುಗಳು ಬಿದ್ದಿರುವುದನ್ನು ಕಂಡು ಈ ಬಗ್ಗೆ ಅನುಮಾನಗೊಂಡ ಮ್ಯಾನೇಜರ್ ರಾಜೇಂದ್ರನ್ ಅವರು ತಮ್ಮ ರಿಸೀವಿಂಗ್ ಸ್ಟೇಷನ್ ನ ಕಂಪೌಂಡ್ ಒಳಗೆ ಇರಿಸಿದ ಅಲ್ಯೂಮಿನಿಯಂ ವಯರ್ ನ ಬಂಡಲ್ ಗಳು, ಮತ್ತು ಇನ್ನಿತರ ಸಲಕರಣೆಗಳನ್ನು ಪರಿಶೀಲನೆ ನಡೆಸಿದಾಗ ಹಳೆಯ ಅಲ್ಯೂಮಿನಿಯಂ ವಯರ್ ಗಳು ಕಳ್ಳತನವಾಗಿರುವುದು ತಿಳಿದು ಈ ವಿಚಾರ ಮೇಲಾಧಿಕಾರಿಗಳಿಗೆ ತಿಳಿಸಿದ ಬಳಿಕ ಮೇಲಾಧಿಕಾರಿಗಳು ಬಂದು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಅಂದಾಜು ಮೌಲ್ಯ 50 ಸಾವಿರ ರೂಪಾಯಿ ಮೌಲ್ಯ ಸುಮಾರು 1100 ಕೆಜಿಯಷ್ಟು ಹಳೆಯ ಅಲ್ಯೂಮಿನಿಯಂ ವಯರ್ ಗಳು ಕಳ್ಳತನವಾಗಿರುವುದಾಗಿ
ಮ್ಯಾನೇಜರ್ ಆಗಿರುವ ರಾಜೇಂದ್ರನ್(50) ಎಂಬವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಿದ ಮೃತಪಟ್ಟ ಮುಸ್ತಾಕ್ ಮತ್ತು ಇತರರ ವಿರುದ್ಧ ಕಲಂ: 331(4), 305 ಜೊತೆಗೆ 3(5)ಬಿ. ಎನ್ ಎಸ್ ಯಂತೆ ಜು.11 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದ್ದರು.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ಮತ್ತು ಸಿಕಂದರ್ ಪಾಷ ತಂಡದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.


