Thursday, July 16, 2026
Homeತಾಜಾ ಸುದ್ದಿಧಾರವಾಡದ ವೈದ್ಯ ಡಾ. ಕಿರಣ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತಿಯನ್ನೇ ಕೊಂದ ವೈದ್ಯೆ ಪತ್ನಿ...

ಧಾರವಾಡದ ವೈದ್ಯ ಡಾ. ಕಿರಣ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತಿಯನ್ನೇ ಕೊಂದ ವೈದ್ಯೆ ಪತ್ನಿ ಪ್ರಿಯಾಂಕಾ ಪೊಲೀಸ್ ವಶಕ್ಕೆ!

- Advertisement -
- Advertisement -

ಧಾರವಾಡದಲ್ಲಿ ನಡೆದಿದ್ದ ಚಿರಾಯು ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಕಿರಣ್ ಹೊನ್ನಣ್ಣನವರ್ ಅವರ ಭೀಕರ ಕೊಲೆ ಪ್ರಕರಣಕ್ಕೆ ಇದೀಗ ಅತ್ಯಂತ ಆಘಾತಕಾರಿ ತಿರುವು ಸಿಕ್ಕಿದೆ. ಪ್ರಕರಣದ ಅಸಲಿ ಕಿಂಗ್‌ಪಿನ್ ಬೇರೆ ಯಾರೂ ಅಲ್ಲ, ಸ್ವತಃ ಮೃತರ ಪತ್ನಿ ಡಾ. ಪ್ರಿಯಾಂಕಾ ಹೊನ್ನಣ್ಣನವರ್ ಎಂಬ ಬೆಚ್ಚಿಬೀಳಿಸುವ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಧಾರವಾಡದ ಕವಿವಿ ರಸ್ತೆಯ ಬಾರಾಕೊಟ್ರಿ ಬಡಾವಣೆಯ ‘ರನ್ಕಾಸ್ಟೆಲ್ಲೋ’ ಅಪಾರ್ಟ್‌ಮೆಂಟ್‌ನಲ್ಲಿ ಈ ಘೋರ ಕೃತ್ಯ ನಡೆದಿದೆ. ಆಸ್ಪತ್ರೆಯ ವ್ಯವಹಾರ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಪ್ರಿಯಾಂಕಾ ಪತಿ ಡಾ. ಕಿರಣ್ ಅವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾಳೆ. ಅಲ್ಲದೆ, ತಡೆಯಲು ಬಂದ ತನ್ನದೇ 10 ವರ್ಷದ ಹೆತ್ತ ಮಗನ ಮೇಲೂ ಆಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ.

ತನಿಖೆಗೆ ಬಂದ ಪೊಲೀಸರಿಗೆ ಘಟನಾ ಸ್ಥಳದಲ್ಲಿ ಆಘಾತ ಕಾಯುತ್ತಿತ್ತು. ಒಂದೆಡೆ ಪತಿ ಡಾ. ಕಿರಣ್ ಹೆಣವಾಗಿ ಬಿದ್ದಿದ್ದರೆ, ಮತ್ತೊಂದೆಡೆ 10 ವರ್ಷದ ಮಗ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ. ಆದರೆ ಕಲ್ಲು ಹೃದಯದ ತಾಯಿ ಪ್ರಿಯಾಂಕಾ ಮಾತ್ರ ಮಗನ ಚೀರಾಟಕ್ಕೆ ಕರಗದೆ, ಪಕ್ಕದ ಬೆಡ್ ಮೇಲೆ ಕುಳಿತು ಮೊಬೈಲ್‌ನಲ್ಲಿ ಆರಾಮಾಗಿ ‘ರೀಲ್ಸ್’ ನೋಡುತ್ತಿದ್ದಳು! ಈ ವಿಚಿತ್ರ ನಡವಳಿಕೆಯೇ ಪೊಲೀಸರ ಅನುಮಾನಕ್ಕೆ ಪ್ರಮುಖ ಕಾರಣವಾಯಿತು.

ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಗುವನ್ನು ಕಂಡು ತಕ್ಷಣವೇ ಚಲನಶೀಲರಾದರು. ಆಂಬ್ಯುಲೆನ್ಸ್‌ಗೆ ಕಾಯದೇ ತಾವೇ ಮಗುವನ್ನು ಎತ್ತಿಕೊಂಡು ಹೋಗಿ ತಮ್ಮ ಅಧಿಕೃತ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆರಂಭದಲ್ಲಿ ಕಳ್ಳರು ನುಗ್ಗಿ ದರೋಡೆ ಮಾಡಿದ್ದಾರೆ ಎಂದು ಬಿಂಬಿಸಲು ಪ್ರಿಯಾಂಕಾ ನಾಟಕವಾಡಿದ್ದಳು. ಆದರೆ ಪೊಲೀಸರ ತೀವ್ರ ವಿಚಾರಣೆಯ ಮುಂದೆ ಆಕೆಯ ಸುಳ್ಳಿನ ಕೋಟೆ ಕುಸಿದು ಬಿದ್ದಿದ್ದು, ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿ ವೈದ್ಯೆ ಪ್ರಿಯಾಂಕಾಳನ್ನು ವಶಕ್ಕೆ ಪಡೆದಿರುವ ಧಾರವಾಡ ಉಪನಗರ ಪೊಲೀಸರು, ಕೊಲೆಗೆ ನಿಖರ ಕಾರಣವೇನು ಎಂಬ ಕುರಿತು ತನಿಖೆ ತೀವ್ರಗೊಳಿಸಿದ್ದಾರೆ.

- Advertisement -

Latest News

error: Content is protected !!