Sunday, October 18, 2026
Homeಕರಾವಳಿ10 ತಿಂಗಳ ಮಗುವಿನ ತಂದೆಯೊಂದಿಗೆ 5 ವರ್ಷದ ಮಗುವಿನ ತಾಯಿ ಪರಾರಿ; ದೂರು ದಾಖಲು

10 ತಿಂಗಳ ಮಗುವಿನ ತಂದೆಯೊಂದಿಗೆ 5 ವರ್ಷದ ಮಗುವಿನ ತಾಯಿ ಪರಾರಿ; ದೂರು ದಾಖಲು

- Advertisement -
- Advertisement -

ಮಂಗಳೂರು: ತಾಲೂಕಿನ ಕೊಳವೂರಿನ ಮುತ್ತೂರು ಸೈಟ್ ನಿವಾಸಿ ಪ್ರಜ್ವಲ್ ಆಚಾರ್ಯ ಎಂಬುವವರು 5 ವರ್ಷದ ಮಗುವಿನ ತಾಯಿಯೊಂದಿಗೆ ಓಡಿ ಹೋಗಿರುವುದಾಗಿ ಅವರ ಪತ್ನಿ ಲೋಲಾಕ್ಷಿ ಅವರು ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಬಜ್ಪೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಶೀಘ್ರ ತನಿಖೆಗೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಎರಡು ವಾರಗಳಿಂದ ಪತಿ ನಾಪತ್ತೆಯಾಗಿದ್ದು, ಇದರಲ್ಲಿ ಪಾಂಡೇಶ್ವರ ನಿವಾಸಿ ಶರ್ಮಿಳಾ ಎಂಬ ವಿವಾಹಿತ ಮಹಿಳೆಯ ಪಾತ್ರವಿದೆ ಎಂದು ಲೋಲಾಕ್ಷಿ ಆರೋಪಿಸಿದ್ದು, ಅವರಿಬ್ಬರ ನಡುವೆ ಆಪ್ತ ಸಂಪರ್ಕವಿತ್ತು ಮತ್ತು ಬ್ಯಾಂಕ್ ಖಾತೆಗಳ ಮೂಲಕ ಹಣದ ವಿನಿಮಯ ನಡೆದಿತ್ತು ಎಂದು ತಿಳಿಸಿದ್ದಾರೆ.

ಅಲ್ಲದೆ, ತಮ್ಮ ಪತಿ ಶರ್ಮಿಳಾಗೆ ಸುಮಾರು 1 ಲಕ್ಷ 30 ಸಾವಿರ ರೂಪಾಯಿ ಸಾಲದ ಹಣವನ್ನು ನೀಡಬೇಕಾಗಿತ್ತು ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮದುವೆಯ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿದ್ದರಿಂದ ಈಗಾಗಲೇ ಸಾಲದ ಸುಳಿಗೆ ಸಿಲುಕಿರುವ ಲೋಲಾಕ್ಷಿ, ಇದೀಗ ಪತಿಯ ನಾಪತ್ತೆಯಿಂದಾಗಿ ಜೀವನ ನಿರ್ವಹಣೆ ಹಾಗೂ ಹತ್ತು ತಿಂಗಳ ಮಗುವಿನ ಆರೈಕೆಗಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಪ್ರಜ್ವಲ್ ನಾಪತ್ತೆಯಾದ ಮರುದಿನವೇ ಅವರ ಮೊಬೈಲ್ ಫೋನ್‌ಗೆ ಸುಬ್ರಹ್ಮಣ್ಯದ ಲಾಡ್ಜ್ ಒಂದರಿಂದ ಕರೆ ಬಂದಿದ್ದು, ಮನೆಯಲ್ಲೇ ಇದ್ದ ಫೋನ್ ಕರೆ ಸ್ವೀಕರಿಸಿದ ಲೋಲಾಕ್ಷಿ ಅವರಿಗೆ ಲಾಡ್ಜ್ ಸಿಬ್ಬಂದಿಯು ಪ್ರಜ್ವಲ್ ಅವರೊಂದಿಗೆ ಓರ್ವ ಯುವತಿ ಇದ್ದ ಸಂಗತಿಯನ್ನು ತಿಳಿಸಿದ್ದು, ಈ ಮಾಹಿತಿಯನ್ನು ಪೊಲೀಸರಿಗೂ ನೀಡಲಾಗಿದೆ. ಮತ್ತೊಂದೆಡೆ, ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಐದು ವರ್ಷದ ಮಗುವಿನ ತಾಯಿ ಶರ್ಮಿಳಾ ಕೂಡ ನಾಪತ್ತೆಯಾಗಿದ್ದು, ಅವರ ಪತಿ ಪಾಂಡೇಶ್ವರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ನಾಪತ್ತೆ ದೂರು ದಾಖಲಿಸಿದ್ದಾರೆ.

ಇನ್ನು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎರಡು ವಾರ ಕಳೆದರೂ ತನಿಖೆಯಲ್ಲಿ ಯಾವುದೇ ನಿರೀಕ್ಷಿತ ಪ್ರಗತಿಯಾಗದ ಹಿನ್ನೆಲೆಯಲ್ಲಿ, ಲೋಲಾಕ್ಷಿ ಅವರು ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ನ್ಯಾಯ ಒದಗಿಸುವಂತೆ ವಿನಂತಿಸಿದ್ದಾರೆ. ಇನ್ನು ಸದ್ಯ ಪೊಲೀಸರು ಎರಡೂ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಿದ್ದು, ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!