
ಬೆಂಗಳೂರು: ಅಣ್ಣನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಯನ್ನು ತಮ್ಮ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೋಡಿಹಳ್ಳಿಯ ಹೆಚ್ಎಎಲ್ ರಸ್ತೆಯಲ್ಲಿ ನಡೆದಿದೆ. ಕಾನೂನು ವಿದ್ಯಾರ್ಥಿನಿ ಅಮೃತಾ (21) ಕೊಲೆಯಾದ ಯುವತಿ.ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೂರ್ಯ ಹಾಗೂ ಆತನ ಅಣ್ಣ ಧನುಷ್ನನ್ನು ಜೀವನ್ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.
ಧಾರ್ಮಿಕ ಸಮಾರಂಭವೊಂದರಲ್ಲಿ ಅಮೃತಾ ಮತ್ತು ಧನುಷ್ ಕುಟುಂಬಗಳ ನಡುವೆ ಸ್ನೇಹ ಏರ್ಪಟ್ಟು, ಆ ಸ್ನೇಹ ಇಬ್ಬರ ನಡುವೆ ಪ್ರೇಮಾಂಕುರವಾಗಲು ಕಾರಣವಾಗಿತ್ತು. ಆದರೆ ಧನುಷ್ ತನಗೆ ಮೊದಲೇ ಮದುವೆಯಾಗಿ ಡಿವೋರ್ಸ್ ಆಗಿರುವ ಕಹಿ ಸತ್ಯವನ್ನು ಹಾಗೂ ತನಗೊಂದು ಮಗು ಇರುವ ವಿಷಯವನ್ನು ಅಮೃತಾಳಿಂದ ಗುಟ್ಟಾಗಿಟ್ಟಿದ್ದ. ಇತ್ತೀಚೆಗೆ ಈ ಧನುಷ್ನ ಮೋಸದ ಜಾಲ ಬಯಲಾಗುತ್ತಿದ್ದಂತೆಯೇ, ನೊಂದ ಅಮೃತಾ ಆತನ ಒಡನಾಟವನ್ನು ಪೂರ್ಣವಾಗಿ ಕಡಿದುಕೊಂಡು ಮದುವೆ ಪ್ರಸ್ತಾಪಕ್ಕೆ ರೆಡ್ ಸಿಗ್ನಲ್ ನೀಡಿದ್ದಳು.
ಕೊಲೆಗೆ ಸ್ಕೆಚ್ ಹಾಕಿದ ತಮ್ಮ: ತನ್ನ ಅಣ್ಣನ ಪ್ರೀತಿಯನ್ನು ತಿರಸ್ಕರಿಸಿದ ಯುವತಿಯನ್ನು ಜೀವಂತವಾಗಿ ಬಿಡಬಾರದು ಎಂದು ಧನುಷ್ನ ಸಹೋದರ ಸೂರ್ಯ ಕ್ರೂರ ಸಂಚು ರೂಪಿಸಿದ್ದ. ಅದರಂತೆ ಜುಲೈ 13ರಂದು ಕೋಡಿಹಳ್ಳಿಯಲ್ಲಿರುವ ಯುವತಿಯ ನಿವಾಸದ ಬಳಿ ಹೊಂಚು ಹಾಕಿ ಬಂದಿದ್ದ ಸೂರ್ಯ, ಆಕೆಯೊಂದಿಗೆ ಗಲಾಟೆ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ತಾನು ಮುಚ್ಚಿಟ್ಟು ತಂದಿದ್ದ ಚಾಕುವನ್ನು ತೆಗೆದು ಅಮೃತಾಳ ಎದೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಇರಿದು ಸ್ಥಳದಿಂದ ಓಡಿಹೋಗಿದ್ದ.
ಕೊನೆಯುಸಿರೆಳೆದ ಕಾನೂನು ವಿದ್ಯಾರ್ಥಿನಿ: ರಕ್ತದ ಮಡುವಿನಲ್ಲಿ ತೀವ್ರವಾಗಿ ಒದ್ದಾಡುತ್ತಿದ್ದ ಯುವತಿಯನ್ನು ನೆರೆಹೊರೆಯವರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ, ಗಾಯದ ತೀವ್ರತೆಯಿಂದಾಗಿ ಆಕೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ. ಮೃತ ದುರ್ದೈವಿ ಅಮೃತಾ ಕಾನೂನು ಪದವಿ ವ್ಯಾಸಂಗ ಮಾಡುತ್ತಾ, ಬಿಡುವಿನ ವೇಳೆಯಲ್ಲಿ ಪಿಜ್ಜಾ ಕೇಂದ್ರವೊಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಕೃತ್ಯಕ್ಕೆ ಸಂಬಂಧಿಸಿದಂತೆ ಜೀವನ್ಭೀಮಾನಗರ ಠಾಣೆ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡು ಇಬ್ಬರೂ ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.


