Tuesday, July 7, 2026
Homeಅಪರಾಧಉದ್ಯೋಗದ ಆಮಿಷವೊಡ್ಡಿ ಮೆಕಾನಿಕಲ್ ಎಂಜಿನಿಯರ್‌ಗೆ ₹2.93 ಲಕ್ಷ ವಂಚನೆ!

ಉದ್ಯೋಗದ ಆಮಿಷವೊಡ್ಡಿ ಮೆಕಾನಿಕಲ್ ಎಂಜಿನಿಯರ್‌ಗೆ ₹2.93 ಲಕ್ಷ ವಂಚನೆ!

- Advertisement -
- Advertisement -

ಮಂಗಳೂರು: ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುವುದಾಗಿ ನಂಬಿಸಿ, ವಿವಿಧ ಶುಲ್ಕಗಳ ನೆಪದಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವೀಧರ ಯುವಕನೊಬ್ಬನಿಂದ ₹2.93 ಲಕ್ಷ ಪಡೆದು ವಂಚಿಸಿರುವ ಘಟನೆ ನಡೆದಿದ್ದು, ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯೋಗದ ಹುಡುಕಾಟದಲ್ಲಿದ್ದ 28 ವರ್ಷದ ದೂರುದಾರರಿಗೆ ಮೇ 27ರಂದು ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ, ತಾನು ಜಾಬ್ ಏಜೆನ್ಸಿಯಿಂದ ಮಾತನಾಡುವುದಾಗಿ ಪರಿಚಯಿಸಿಕೊಂಡು ಬೆಂಗಳೂರಿನ ಹೊಸಕೋಟೆಯ ಕಂಪೆನಿಯೊಂದರಲ್ಲಿ ‘ಮೆಕಾನಿಕಲ್ ಪ್ರೊಡಕ್ಷನ್ ಎಂಜಿನಿಯರ್’ ಹುದ್ದೆಗೆ ಸಂದರ್ಶನ ಇರುವುದಾಗಿ ತಿಳಿಸಿದ್ದ. ಆರಂಭದಲ್ಲಿ ಸಂದರ್ಶನ ಶುಲ್ಕವಾಗಿ ₹2,000 ಪಡೆದಿದ್ದಲ್ಲದೆ, ಮೇ 29ರಂದು ಇಮೇಲ್ ಮೂಲಕ ವೀಡಿಯೋ ಲಿಂಕ್ ಕಳುಹಿಸಿ ಆನ್‌ಲೈನ್ ಸಂದರ್ಶನವನ್ನೂ ನಡೆಸಲಾಗಿತ್ತು.

ಬಳಿಕ ಜೂನ್ 1ರಂದು ಕರೆ ಮಾಡಿ ನೀವು ಸಂದರ್ಶನದಲ್ಲಿ ಆಯ್ಕೆಯಾಗಿದ್ದೀರಿ ಎಂದು ನಂಬಿಸಿದ ವಂಚಕರು, ಹುದ್ದೆಯ ಪ್ರಕ್ರಿಯೆಗಾಗಿ ₹20,000, ಗೇಟ್ ಪಾಸ್ ಚಾರ್ಜ್ ಎಂದು ₹27,600 ಹಾಗೂ ಮೆಡಿಕಲ್ ಚಾರ್ಜ್ ಸೇರಿದಂತೆ ಜೂನ್ 25ರ ಅವಧಿಯಲ್ಲಿ ವಿವಿಧ ಕಾರಣಗಳನ್ನು ನೀಡಿ ಹಂತ-ಹಂತವಾಗಿ ಹಣ ಪೀಕಿದ್ದಾರೆ. ಜುಲೈ 26ರಂದು ಆರೋಪಿಗಳು ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಅನುಮಾನಗೊಂಡ ಯುವಕ, ತನಗೆ ಈ ಕೆಲಸ ಬೇಡವೆಂದು ಪ್ರಕ್ರಿಯೆಯನ್ನು ರದ್ದುಗೊಳಿಸಲು (ಕ್ಯಾನ್ಸಲ್) ಸೂಚಿಸಿದ್ದಾರೆ.

ಆಗ ವಂಚಕರು ಕ್ಯಾನ್ಸಲೇಶನ್ ಚಾರ್ಜ್ ಆಗಿ ₹15,579 ಪಾವತಿಸಿದರೆ ಹಳೆಯ ಹಣವನ್ನೆಲ್ಲಾ ವಾಪಸ್ ನೀಡುವುದಾಗಿ ನಂಬಿಸಿದ್ದು, ಯುವಕ ಆ ಮೊತ್ತವನ್ನೂ ಪಾವತಿಸಿದ್ದಾರೆ. ಆದರೆ ಆ ಬಳಿಕ ಕೆಲಸವನ್ನೂ ಕೊಡದೆ, ಹಣವನ್ನೂ ವಾಪಸ್ ನೀಡದೆ ವಂಚಿಸಿದ್ದಾರೆ. ಕೊನೆಗೆ ತಾವು ಮೋಸ ಹೋಗಿರುವುದನ್ನು ಅರಿತ ಯುವಕ ಒಟ್ಟು ₹2,93,512 ಕಳೆದುಕೊಂಡಿದ್ದು, ಸದ್ಯ ಸೈಬರ್ ಕ್ರೈಂ ಸಹಾಯವಾಣಿ ಹಾಗೂ ಕಂಕನಾಡಿ ನಗರ ಠಾಣೆಗೆ ದೂರು ನೀಡಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!