ತಿರುವನಂತಪುರಂ: ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಸನ್ ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕೇರಳ ಉಸ್ತುವಾರಿ ದೀಪಾ ದಾಸ್ ಮುನ್ಶಿ ಸುದ್ದಿಗೋಷ್ಠಿಯಲ್ಲಿ ಸತೀಸನ್ ಹೆಸರನ್ನು ಘೋಷಿಸಿದ್ದಾರೆ.
ಬಹುತೇಕ ಸೋಮವಾರ ಮುಖ್ಯಮಂತ್ರಿಯಾಗಿ ಸತೀಸನ್ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಮೂಲಕ ಸಿಎಂ ಸ್ಥಾನದ ರೇಸ್ ನಲ್ಲಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಗೆ ಅವಕಾಶ ಕೈತಪ್ಪಿದಂತಾಗಿದೆ.
ಪರವೂರ್ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿ.ಡಿ. ಸತೀಸನ್ ಕಳೆದ ಬಾರಿ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟವನ್ನು ಮುನ್ನಡೆಸಿದ್ದ ಸತೀಸನ್ ಅವರಿಗೆ ಮಿತ್ರಪಕ್ಷಗಳ ಪೂರ್ಣ ಬೆಂಬಲ ವ್ಯಕ್ತವಾಗಿತ್ತು.
ಹತ್ತು ದಿನಗಳ ಕಾಲ ನಡೆದ ಕೇರಳಂ ಸಿಎಂ ಸ್ಥಾನದ ಕಸರತ್ತಿನಲ್ಲಿ ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಕೂಡಾ ಸ್ಪರ್ಧೆಯಲ್ಲಿದ್ದರು.


