ಉಡುಪಿ: ಇಂಜೆಕ್ಷನ್ ಮೂಲಕ ಪತ್ನಿಗೆ ವಿಷವಿಟ್ಟು ಕೊಲ್ಲಲು ಯತ್ನಿಸಿದ್ದ ಆರೋಪಿ ಪತಿ ಹಾಗೂ ಆತನ ಪ್ರೇಯಸಿ ಸೌಪರ್ಣಿಕಾ ನದಿ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗೋಳಿಹೊಳೆ ಗ್ರಾಮದ ಚಾರ್ಸಾಲಿನಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಮೃತರನ್ನು ಗೋಳಿಹೊಳೆ ನಿವಾಸಿ, ಆಟೋ ಚಾಲಕ ವಿಠ್ಠಲ ನಾಯ್ಕ (35) ಹಾಗೂ ಜಡ್ಕಲ್ನ ನಿವಾಸಿ ಭವ್ಯಾ ನಾಯ್ಕ (33) ಎಂದು ಗುರುತಿಸಲಾಗಿದೆ.
ಸುಮಾರು 20 ದಿನಗಳ ಹಿಂದೆ ವಿಠ್ಠಲ ನಾಯ್ಕ ತನ್ನ ಪ್ರೇಯಸಿ ಭವ್ಯಾ ಜೊತೆಗೂಡಿ ಪತ್ನಿ ಶ್ಯಾಮಲಾಗೆ ವಿಷಕಾರಿ ಇಂಜೆಕ್ಷನ್ ನೀಡಿ ಕೊಲೆಗೆ ಯತ್ನಿಸಿದ್ದನು. ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಶ್ಯಾಮಲಾ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮೃತ ವಿಠ್ಠಲ್ಗೆ 10 ವರ್ಷದ ಪುತ್ರ ಹಾಗೂ 2 ತಿಂಗಳ ಹಸುಗೂಸಿದೆ.
ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರೂ, ಸೌಪರ್ಣಿಕಾ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ನೇಣಿಗೆ ಶರಣಾಗಿದ್ದಾರೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಬ್ಬರೂ ಕೆಲ ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೈಂದೂರು ಪೊಲೀಸರು ಹಾಗೂ ತನಿಖಾ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


