
ಮಣಿಪಾಲ: ಮಣಿಪಾಲ ತಾಂತ್ರಿಕ ಸಂಸ್ಥೆಯ ಲೇಡಿಸ್ ಹಾಸ್ಟೆಲ್‌ನ ಕೊಠಡಿಯಲ್ಲಿ ಬಿ.ಟೆಕ್ 3ನೇ ವರ್ಷದ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ (ನವೆಂಬರ್ 11) ಬೆಳಕಿಗೆ ಬಂದಿದೆ.
ಹಾಸ್ಟೆಲ್‌ನ 4ನೇ ಮಹಡಿಯ ಕೊಠಡಿಯಲ್ಲಿ ವಾಸವಿದ್ದ ಶ್ರೀಯಾ ಪರ್ಗಿ (21) ಮೃತ ವಿದ್ಯಾರ್ಥಿನಿ. ಮಂಗಳವಾರ ರಾತ್ರಿ 9.39ರ ಸುಮಾರಿಗೆ ಬಯೋಮೆಟ್ರಿಕ್ ಹಾಜರಾತಿ ದಾಖಲಿಸಿ ಇವರು ತಮ್ಮ ಕೊಠಡಿಗೆ ತೆರಳಿದ್ದರು. ಬುಧವಾರ ಶ್ರೀಯಾ ಫೋನ್ ಕರೆಗಳನ್ನು ಸ್ವೀಕರಿಸದಿದ್ದಾಗ ಹಾಗೂ ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಅನುಮಾನಗೊಂಡ ಕೇರ್ ಟೇಕರ್, ಹೆಚ್ಚುವರಿ ಕೀ ಬಳಸಿ ಬಾಗಿಲು ತೆರೆಯಲು ಯತ್ನಿಸಿದ್ದರು. ಅದು ಸಾಧ್ಯವಾಗದಿದ್ದಾಗ ಕ್ಯಾಂಪಸ್ ಭದ್ರತಾ ಸಿಬ್ಬಂದಿಯ ನೆರವಿನಿಂದ ಬಾಗಿಲಿನ ಚಿಲಕ ಮುರಿದು ಒಳಗೆ ನೋಡಿದಾಗ, ವಿದ್ಯಾರ್ಥಿನಿ ಫ್ಯಾನ್ ಹುಕ್ಕಿಗೆ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


