ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಕಾರಣ ಕೂಲಿ ಕಾರ್ಮಿಕರು ಬೇರೆ ಪ್ರದೇಶಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಮನೆಗೆ ತಲುಪಿಸುವ ಕಾರ್ಯ ಶುರುವಾಗಿದೆ. ತೆಲಂಗಾಣದ ಲಿಂಗಮಪೆಲ್ಲಿಯಲ್ಲಿ ಸಿಕ್ಕಿಬಿದ್ದಿದ್ದ ಕಾರ್ಮಿಕರನ್ನು ಊರು ತಲುಪಿಸಲು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ರೈಲು ಇಂದು ರಾತ್ರಿ ಜಾರ್ಖಂಡ್ ತಲುಪಲಿದೆ.
ಕಾರ್ಮಿಕರನ್ನು ಮರಳಿ ಕರೆತರಲು ವಿಶೇಷ ರೈಲು ವ್ಯವಸ್ಥೆ ಮಾಡುವಂತೆ ಅನೇಕ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಮನವಿ ಮಾಡಿವೆ. ತೆಲಂಗಾಣದಲ್ಲಿ ಸಿಲುಕಿ ಹಾಕಿಕೊಂಡಿದ್ದ ಜಾರ್ಖಂಡ್‌ನ 1200 ವಲಸೆ ಕಾರ್ಮಿಕರಿಗಾಗಿ ಒಂದು ವಿಶೇಷ ರೈಲನ್ನು ತೆಲಂಗಾಣದ ಲಿಂಗಂಪಲ್ಲಿಯಿಂದ ಶುಕ್ರವಾರ ಬೆಳಿಗ್ಗೆ 5.30ಕ್ಕೆ ಬಿಡಲಾಗಿದೆ. ಪ್ರತಿ ಬೋಗಿಯಲ್ಲಿ 54 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿರುವ ಈ ರೈಲು ರಾತ್ರಿ 11ಕ್ಕೆ ಜಾರ್ಖಂಡ್‌ನ ಹತಿಯಾ ತಲುಪಲಿದೆ.
ನಿಲುಗಡೆ ರಹಿತವಾದ ಈ ರೈಲು ಮಾರ್ಗ ಮಧ್ಯೆ ನೀರು ಮತ್ತು ಆಹಾರ ಭರಿಸಿಕೊಳ್ಳಲು ಹಾಗೂ ಸಿಬ್ಬಂದಿ ಬದಲಾವಣೆಗಾಗಿ ಕೇವಲ ಒಂದು ಕಡೆ ಮಾತ್ರ ನಿಲ್ಲಲಿದೆ. ಎಲ್ಲ ಪ್ರಯಾಣಿಕರಗೂ ಮಾಸ್ಕ್ (ಮುಖಗವಸು) ಮತ್ತು ಗ್ಲೌಸ್ (ಕೈಗವಸು) ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರೈಲ್ವೆ ಸುರಕ್ಷಾ ದಳದ (ಆರ್‌ಪಿಎಫ್) ಸಿಬ್ಬಂದಿಯನ್ನು ಪ್ರತಿ ಬೋಗಿಗೂ ನಿಯೋಜಿಸಲಾಗಿದೆ..
ದೇಶದಲ್ಲಿ ಲಾಕ್ ಡೌನ್ ವೇಳೆ ಕಾರ್ಮಿಕರನ್ನು ಕರೆದೊಯ್ಯುತ್ತಿರುವ ಮೊದಲ ರೈಲು ಇದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೈಲು ಬಿಡುವ ನಿರೀಕ್ಷೆಯಿದೆ. ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ತಲುಪಿಸಲು ವಿಶೇಷ ರೈಲುಗಳನ್ನು ನಿಯೋಜಿಸುವಂತೆ ಆಯಾ ರಾಜ್ಯ ಸರ್ಕಾರಗಳು ಕೇಂದ್ರದ ಮೇಲೆ ಒತ್ತಡ ಹೇರುತ್ತಿವೆ. ಬಿಹಾರ, ರಾಜಸ್ಥಾನ, ಜಾರ್ಖಂಡ್ ಮತ್ತು ಮಹಾರಾಷ್ಟ್ರ ಸರ್ಕಾರಗಳು ಈ ರೀತಿ ಮನವಿ ಮಾಡಿಕೊಂಡಿವೆ.