ಮಂಗಳೂರು: ಇದೇ 25ರಿಂದ ಮೂರು ದಿನಗಳ ಕಾಲ ತೊಕ್ಕೊಟ್ಟುವಿನಲ್ಲಿ ಡಿವೈಎಫ್‌ಐ ಸಮ್ಮೇಳನವನ್ನು ಏರ್ಪಡಿಸಿದ್ದು, ಇದರ ಅಂಗವಾಗಿ ಪಾವೂರು ಗ್ರಾಮದ ಹರೇಕಳದಲ್ಲಿ ಸಂಘಟನೆಯ ಕಚೇರಿ ಬಳಿ ಅಳವಡಿಸಿರುವ ಟಿಪ್ಪು ಸುಲ್ತಾನ್ ಕಟೌಟ್ ತೆರವುಗೊಳಿಸುವಂತೆ ಕೊಣಾಜೆ ಠಾಣೆ ಇನ್‌ಸ್ಪೆಕ್ಟರ್ ಹರೇಕಳ ಡಿವೈಎಫ್‌ಐ ಘಟಕದ ಅಧ್ಯಕ್ಷರಿಗೆ ಭಾನುವಾರ ನೋಟೀಸ್ ನೀಡಿದ್ದಾರೆ.
ಹರೇಕಳ ಡಿವೈಎಫ್‌ಐ ಈ ನೋಟಿಸ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನ್ ಕಟೌಟ್ ತೆರವುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು ‘ಹರೇಕಳದಲ್ಲಿ ಡಿವೈಎಫ್‌ಐ ಸಂಘಟನೆಗೆ ಕಚೇರಿ ಬಳಿ 6 ಅಡಿ ಎತ್ತರದ ಟಿಪ್ಪು ಪ್ರತಿಮೆಯನ್ನು ಯಾವುದೇ ಅನುಮತಿ ಪಡೆಯದೇ ಅಳವಡಿಸಿರುವುದು ಕಂಡುಬಂದಿದೆ. ಠಾಣೆಯ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕಟೌಟ್ ತೆರವುಗೊಳಿಸಬೇಕು’ ಎಂದು ಕೊಣಾಜೆ ಠಾಣಾಧಿಕಾರಿ ನೋಟಿಸ್‌ನಲ್ಲಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನೋಟಿಸ್ ಕುರಿತು ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಯ್ತಿಯಾಜ್ ಆಕ್ಷೇಪ ವ್ಯಕ್ತಪಡಿಸಿದ್ದು, ‘ಡಿವೈಎಫ್‌ಐ ಸಮ್ಮೇಳನದ ಪ್ರಯುಕ್ತ ನಾಡಿನ ಆದರ್ಶ ಪುರುಷರ, ಸ್ವಾತಂತ್ರ್ಯ ಸೇನಾನಿಗಳ, ಸಮಾಜ ಸುಧಾರಕರ ಕಟೌಟ್ ಹಾಗೂ ಪ್ಲೆಕ್ಸ್‌ಗಳನ್ನು ಅಲ್ಲಲ್ಲಿ ಅಳವಡಿಸಿದ್ದೇವೆ. ಟಿಪ್ಪು ಸುಲ್ತಾನ್ ಕಟೌಟ್, ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಸರ್ಕಾರ ನಿಷೇಧ ಹಾಕಿದೆಯಂತೆ. ಇಂತಹ ನಿಷೇಧ ಹೇರಿದ್ದು ಯಾವ ಸರ್ಕಾರ, ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಿಜೆಪಿ ನೇತೃತ್ವದ ಸರ್ಕಾರವೇ ಇದೆಯೇ, ಈಗಲೂ ಪೊಲೀಸರು ‘ಸಂಘ’ ಮನಃಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ .
ಡಿವೈಎಫ್‌ಐ, ‘ಟಿಪ್ಪು ಕಟೌಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಕೋಟಿ-ಚನ್ನಯರ ಪ್ರತಿಮೆಗಳೂ ಸೇರಿದಂತೆ ಎಲ್ಲಾ ಆದರ್ಶ ವ್ಯಕ್ತಿಗಳ ಕಟೌಟ್, ಬ್ಯಾನರ್‌ಗಳ ಬಳಿ ಡಿವೈಎಫ್‌ಐ ಕಾರ್ಯಕರ್ತರು ಕಾವಲು ಕಾಯುತ್ತಾರೆ’ ಎಂದು ತಿಳಿಸಿದ್ದಾರೆ.