Thursday, April 25, 2024
Homeತಾಜಾ ಸುದ್ದಿಬಂಡಾಯಕ್ಕೆ ಮಣಿದ ಬೋರಿಸ್: ನಾರಾಯಣಮೂರ್ತಿ ಅಳಿಯ ಮುಂದಿನ ಪ್ರಧಾನಿ?

ಬಂಡಾಯಕ್ಕೆ ಮಣಿದ ಬೋರಿಸ್: ನಾರಾಯಣಮೂರ್ತಿ ಅಳಿಯ ಮುಂದಿನ ಪ್ರಧಾನಿ?

spot_img
- Advertisement -
- Advertisement -

ಲಂಡನ್‌: ಬ್ರಿಟನ್‌ ಸರ್ಕಾರದಲ್ಲಿನ ಸಚಿವರು ಒಬ್ಬರಿಂದೊಬ್ಬರು ರಾಜೀನಾಮೆ ನೀಡಿ ಹೊರ ನಡೆಯುತ್ತಿದ್ದಂತೆ, ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಸ್ಥಾನಕ್ಕೆ ಕಂಟಕ ಎದುರಾಗಿದೆ. ಆಡಳಿತಾರೂಢ ಕನ್ಸರ್ವೆಟಿವ್‌ ಪಾರ್ಟಿಯ ಸಂಸದರ ಬಂಡಾಯಕ್ಕೆ ಮಣಿದಿರುವ ಬೋರಿಸ್‌, ಪ್ರಧಾನಿ ಹುದ್ದೆ ತೊರೆಯಲು ನಿರ್ಧರಿಸಿದ್ದಾರೆ. ಸರ್ಕಾರದ ಭಾಗವಾಗಿರುವವರ ಪೈಕಿ ಈಗಾಗಲೇ ನಲವತ್ತು ಮುಖಂಡರು ರಾಜೀನಾಮೆ ನೀಡಿದ್ದಾರೆ. ಈ ನಡುವೆ ಮುಂದಿನ ಪ್ರಧಾನಿಯ ಆಯ್ಕೆಯ ಬಗೆಗೂ ಚರ್ಚೆ ಜೋರಾಗಿದೆ.

ಕೋವಿಡ್‌ ಅವಧಿಯಲ್ಲಿ ಕೈಗೊಂಡ ಹಣಕಾಸು ಕಾರ್ಯಕ್ರಮಗಳ ಮೂಲಕ ಉತ್ತಮ ಹೆಸರು ಪಡೆದಿದ್ದ ರಿಷಿ ಸುನಕ್‌ ಇತ್ತೀಚೆಗಷ್ಟೇ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ. ಇನ್ಫೊಸಿಸ್‌ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ, ಪ್ರಧಾನಿ ಅಭ್ಯರ್ಥಿಯಾಗಿರುವ ಸಾಧ್ಯತೆಯ ಬಗ್ಗೆ ವರದಿಗಳಾಗಿವೆ.

ಹಲವು ಹಗರಣಗಳು ಹಾಗೂ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಔತಣಕೂಟ ನಡೆಸಿರುವುದು ಬೋರಿಸ್‌ ವಿರುದ್ಧ ಮುಳುವಾಗಿ ಪರಿಣಮಿಸಿದೆ. ಪ್ರಧಾನಿ ಅಧಿಕೃತ ನಿವಾಸವಿರುವ ಡೌನಿಂಗ್‌ ಸ್ಟ್ರೀಟ್‌ನಲ್ಲಿ ಕನ್ಸರ್ವೆಟಿವ್‌ ಪಾರ್ಟಿಯ ಹಲವು ಸಂಸದರು ಬಂಡಾಯ ಘೋಷಿಸಿದ್ದು, ಸ್ಥಾನ ತೊರೆಯುವಂತೆ ಒತ್ತಾಯಿಸಿದ್ದಾರೆ.

ಬಂಡಾಯದ ಬಿಸಿಯಿಂದ ಅಂತರ ಕಾಯ್ದುಕೊಂಡಿರುವ ಬೋರಿಸ್‌, ಪ್ರಧಾನಿ ಸ್ಥಾನದಲ್ಲಿ ಮುಂದುವರಿಯುವ ಪಣ ತೊಟ್ಟಿದ್ದರು. ‘ಉಳಿಯುವೆ ಮತ್ತು ಹೋರಾಡುವೆ’ ಎಂದು ಶಪಥ ಮಾಡಿದ್ದ ಅವರು, ಈಗ ಹುದ್ದೆ ತೊರೆಯಲು ನಿರ್ಧರಿಸಿದ್ದಾರೆ.

ಇದು ಸ್ಥಾನ ತೊರೆಯುವ ಸಮಯ ಎಂದು ಸಲಹೆ ನೀಡಿದ ಸಂಪುಟದ ಹಿರಿಯ ಸಚಿವ ಮೈಕೆಲ್‌ ಗೋವ್‌ ಅವರನ್ನು ಬೋರಿಸ್‌ ಸಂಪುಟದಿಂದ ಹೊರ ಹಾಕಿದ್ದಾರೆ. ಸಂಸದರ ವಿಶ್ವಾಸ ಕಳೆದುಕೊಂಡಿರುವ ಬಗ್ಗೆ ಗೋವ್‌ ಅವರು ಪ್ರಧಾನಿಗೆ ನೇರವಾಗಿ ತಿಳಿಸಿದ್ದರು. ಅದರ ಬೆನ್ನಲ್ಲೇ ಗೋವ್‌ ಸ್ಥಾನ ಕಳೆದುಕೊಂಡಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ತೀವ್ರ ಅಸಹನೆ ವ್ಯಕ್ತಪಡಿಸಿರುವ ಬೋರಿಸ್‌ ಸಹವರ್ತಿಗಳು, ಅವರನ್ನು ಹಾವಿಗೆ ಹೋಲಿಸಿದ್ದಾರೆ. ಗೃಹ ಸಚಿವೆ ಪ್ರೀತಿ ಪಟೇಲ್‌ ಸಹ ಬೋರಿಸ್‌ ಪರ ಬೆಂಬಲವನ್ನು ಹಿಂಪಡೆದಿದ್ದಾರೆ.

ಕಳೆದ ತಿಂಗಳು ನಡೆದ ಅವಿಶ್ವಾಸ ನಿಲುವಳಿಯಲ್ಲಿ ಬೋರಿಸ್‌ ಅವರು ವಿಶ್ವಾಸ ಗಿಟ್ಟಿಸುವ ಮೂಲಕ ಪ್ರಧಾನಿಯಾಗಿ ಮುಂದುವರಿದರು. ಅನಂತರದ ಬೆಳವಣಿಯಲ್ಲಿ ತಮ್ಮದೇ ಪಕ್ಷದ ಸದಸ್ಯರಿಂದ ತೀವ್ರ ಟೀಕೆಗಳನ್ನು ಪ್ರಧಾನಿ ಎದುರಿಸುತ್ತಿದ್ದಾರೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ನ ಅಟಾರ್ನಿ ಜನರಲ್‌ ಬ್ರೇವರ್ಮನ್‌ ಅವರು ಬೋರಿಸ್‌ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!