ಬೆಂಗಳೂರು, ಏ.14- ಕೋವಿಡ್-19 ರೋಗದ ತಡೆಗಟ್ಟುವಿಕೆ, ಚಿಕಿತ್ಸೆಗಾಗಿ ಹಾಗೂ ಕೊರೊನ ವೈರಸ್‍ನಿಂದಾಗಿ ದೈಹಿಕ, ಮಾನಸಿಕ, ಆರ್ಥಿಕ ಸಂಕಟಗಳಿಗೆ ಗುರಿಯಾದವರಿಗೆ ಸಹಾಯ ಒದಗಿಸುವ ಸಲುವಾಗಿ ಮಾತಾ ಅಮೃತಾನಂದಮಯಿ ಮಠವು 13 ಕೋಟಿ ರೂ.ಗಳ ಧನಸಹಾಯ ಒದಗಿಸುವುದಾಗಿ ಪ್ರಕಟಿಸಿದೆ.
ಇದಲ್ಲದೆ ಕೋವಿಡ್-19 ರೋಗಿಗಳಿಗೆ ಕೊಚ್ಚಿಯಲ್ಲಿರುವ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಥವಾ ಅಮೃತಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಮಠವು ಮುಂದೆಬಂದಿದೆ. 10 ಕೋಟಿ ರೂ.ವನ್ನು ಪ್ರಧಾನಮಂತ್ರಿಯವರ ನಿಧಿಗೆ ನೀಡಲು ಮುಂದೆ ಬಂದಿದೆ.
ಮಠವು ನೀಡಿದ ಪ್ರಕಟಣೆಯಲ್ಲಿ ಅಮ್ಮ, ಇಡೀ ಪ್ರಪಂಚವು ವೇದನೆಯಿಂದ ಆಕ್ರಂದನ ಮಾಡುತ್ತಿರುವುದನ್ನು ಕಾಣುವಾಗ ಅಮ್ಮನ ಹೃದಯಕ್ಕೆ ತುಂಬಾ ದುಃಖವಾಗುತ್ತಿದೆ, ಎಂದಿದ್ದಾರೆ. ಈ ಮಹಾಮಾರಿಯಿಂದಾಗಿ ಸತ್ತವರ ಆತ್ಮಶಾಂತಿಗಾಗಿ, ಅವರ ಬಂಧುಮಿತ್ರರ ಮನಶ್ಶಾಂತಿಗಾಗಿ, ಲೋಕಶಾಂತಿಗಾಗಿ, ಹಾಗೂ ಈಶ್ವರನ ಕೃಪೆಗಾಗಿ ನಾವೆಲ್ಲರೂ ಪ್ರಾರ್ಥನೆ ಮಾಡೋಣ ಎಂದಿದ್ದಾರೆ.
ಅಮ್ಮನ ವಿನಂತಿಯ ಮೇರೆಗೆ ಅಮೃತ ವಿಶ್ವವಿದ್ಯಾಪೀಠ ಮತ್ತು ಅಮೃತ ಆಸ್ಪತ್ರೆ, ಮಾನಸಿಕ ಆರೋಗ್ಯ ಸೇವೆ ನೀಡಲೆಂದೇ ಒಂದು ಹಾಟ್‍ಲೈನ್ ತೆರೆದಿವೆ. (0476-280 5050). ಈ ಮಹಾಮಾರಿಯಿಂದಾಗಿ ಮತ್ತದರ ವಿವಿಧ ಪರಿಣಾಮಗಳಿಂದಾಗಿ ಮಾನಸಿಕ ಒತ್ತಡ, ಆತಂಕ, ಖಿನ್ನತೆ ಇವುಗಳಿಗೆ ತುತ್ತಾಗಿರುವ ಜನರು ಈ ದೂರವಾಣಿ ಸಂಖ್ಯೆಗೆ ಕರೆಮಾಡಿ, ಉಚಿತವಾಗಿ ಸಹಾಯ ಸಲಹೆಗಳನ್ನು ಪಡೆದುಕೊಳ್ಳಬಹುದು.