ಮಂಗಳೂರು; ಜೋಕಟ್ಟೆಯಲ್ಲಿ ನಡೆದ ವ್ಯಕ್ತಿಯ ಕೊಲೆ ಪ್ರಕರಣದ ಆರೋಪಿಗಳನ್ನು ಪಣಂಬೂರು ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿಹಾರ್ ರಾಜ್ಯದ ಪ್ರಶಾಂತ್ ಕುಮಾರ್(36), ಪಿಂಕೂ ಮಹ್ತೋ (33) ಬಂಧಿತರು.
ದಿನಾಂಕ; 10.06.2026 ರಂದು ಬೆಳಿಗ್ಗೆ 8.00 ಗಂಟೆಯ ಸುಮಾರಿಗೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62 ನೇ ತೋಕೂರು ಗ್ರಾಮದ ಜೋಕಟ್ಟೆ ಅರಿಕೆರೆ ಎಂಬಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ಸೇರಿದ ನೀರು ಹರಿಯುವ ತೋಡಿನಲ್ಲಿ ಸುಮಾರು 35-40 ವರ್ಷದ ಅಪರಿಚಿತ ಗಂಡಸಿನ ಮೃತದೇಹವು ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ ಸ್ಥಿತಿಯಲ್ಲಿ ದೊರೆತಿತ್ತು. ಈ ಬಗ್ಗೆ ಕಿಶೋರ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.
ಅದರಂತೆ ಆರೋಪಿಗಳ ಪತ್ತೆ ಕಾರ್ಯ ನಡೆಸಿದ ಪೊಲೀಸರು ಆರೋಪಿ ಪ್ರಶಾಂತ್ ಕುಮಾರ್ ಎಂಬಾತನನ್ನು ದಿನಾಂಕ:13.06.2026 ರಂದು ಬೆಳಗಿನ ಜಾವ 1.30 ಗಂಟೆಗೆ ಗೋವಾ ರಾಜ್ಯದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಹಚ್ಚಿ ಠಾಣೆಗೆ ಕರೆತಂದು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನೊಬ್ಬ ಆರೋಪಿ ಪಿಂಕೂ ಮಹ್ತೋ ಎಂಬಾತನನ್ನು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಜೋಕಟ್ಟೆ ವಿಜಯ ವಿಠಲ ಭಜನಾ ಮಂದಿರದ ಬಳಿಯಿಂದ ಬಂಧಿಸಿದ್ದಾರೆ. ಆರೋಪಿಗಳು ಬಿಹಾರ ರಾಜ್ಯದವರಾಗಿದ್ದು, ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ತಮ್ಮ ಸಂಸಾರದೊಂದಿಗೆ ವಾಸವಾಗಿದ್ದರು. 1 ನೇ ಆರೋಪಿ ಪ್ರಶಾಂತ್ ಕುಮಾರನು ಎಮ್.ಆರ್.ಪಿ.ಎಲ್ ನಲ್ಲಿ ವೆಲ್ಡಿಂಗ್ ಕೆಲಸವನ್ನು ಮತ್ತು 2 ನೇ ಆರೋಪಿ ಪಿಂಕೂ ಮೆಹ್ತೋ ಈತನು ಬಾರ್ ಬೈಂಡಿಂಗ್ ಕೆಲಸ ಮಾಡಿಕೊಂಡಿರುತ್ತಾನೆ.ಪ್ರಕರಣದಲ್ಲಿ ಮೃತಪಟ್ಟ ಅಪರಿಚಿತ ಗಂಡಸಿನ ಗುರುತು ಪತ್ತೆ ಹಚ್ಚಲಾಗಿದ್ದು ಮೃತ ವ್ಯಕ್ತಿ ಹೆಸರು ಚಂದನ್ ಚೌಹಾನ್ (39) ಎನ್ನಲಾಗಿದೆ.
ಆರೋಪಿತ ಪ್ರಶಾಂತ್ ಕುಮಾರ್‌ನ ಪತ್ನಿಯು ಕಳೆದ ಏಪ್ರಿಲ್ ತಿಂಗಳಿನಲ್ಲಿ ಇನ್ನೋರ್ವ ಯುವಕನ ಜೊತೆಯಲ್ಲಿ ಮನೆ ಬಿಟ್ಟು ಹೋಗಿದ್ದು, ಆಕೆ ಮನೆ ಬಿಟ್ಟು ಹೋಗಲು ಪ್ರಕರಣದಲ್ಲಿ ಕೊಲೆಯಾದ ಚಂದನ್ ಚೌಹಾನ್ ಸಹಾಯ ಮಾಡಿದ್ದ ಎನ್ನಲಾಗಿದೆ. ಇನ್ನು, ಆರೋಪಿ ಪ್ರಶಾಂತ್ ಕುಮಾರ್ ಗೆ ಅಪಘಾತವಾಗಿ ಮನೆಯಲ್ಲಿಯೇ ಇರುವುದರಿಂದ ಆತನ ಪತ್ನಿ ಸಣ್ಣ ಹುಡುಗನ ಜೊತೆಯಲ್ಲಿ ಮನೆ ಬಿಟ್ಟು ಹೋಗಿರುವುದಾಗಿ ಚಂದನ್ ಅಲ್ಲಿ ಇಲ್ಲಿ ಆರೋಪಿ ಪ್ರಶಾಂತನ ಬಗ್ಗೆ ಅಪಪ್ರಚಾರ ಮಾಡಿದ್ದ ಎಂದು ಪ್ರಶಾಂತ್ ಆತನ ಮೇಲೆ ಸಿಟ್ಟಾಗಿದ್ದ. ಹೀಗಾಗಿ ತನ್ನ ಸ್ನೇಹಿತ ಪಿಂಕೂ ಮಹ್ತೋ ಜೊತೆ ಸೇರಿಕೊಂಡು ದಿನಾಂಕ 09/06/2026 ರಂದು ಸಂಜೆ 6:00 ಗಂಟೆ ವೇಳೆ ಚಂದನ್ ನ ತಲೆ, ಮುಖಕ್ಕೆ ಬಲವಾದ ದೊಣ್ಣೆಯಿಂದ ಹೊಡೆದು ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿ ಮೃತದೇಹವನ್ನು ತನ್ನ ಜೋಕಟ್ಟೆ ಬಾಡಿಗೆ ಮನೆಯ ಪಕ್ಕದಲ್ಲಿರುವ ತೋಡಿನಲ್ಲಿ ಬಿಸಾಡಿದ್ದರು.
ಈ ಪ್ರಕರಣವನ್ನು ಅತೀ ಶೀಘ್ರದಲ್ಲಿ ಬೇಧಿಸುವಲ್ಲಿ ಪಣಂಬೂರು ಪೊಲೀಸರು ಸಫಲರಾಗಿದ್ದು ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶ್ರೀಕಾಂತ.ಕೆ.ರವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ರವರು ಪ್ರಕರಣವನ್ನು ಭೇಧಿಸಿರುತ್ತಾರೆ. ಪಣಂಬೂರು ಪೊಲೀಸ್ ಠಾಣಾ ಉಪ ನಿರೀಕ್ಷಕರುಗಳಾದ ಶ್ರೀಮತಿ ಶ್ರೀಕಲಾ ಕೆ.ಟಿ ,ಶ್ರೀ ಜ್ಞಾನಶೇಖರ ಹಾಗೂ ಸಿಬ್ಬಂದಿಗಳಾದ ಇಮ್ತಿಯಾಝ್, ಸುರೇಂದ್ರ, ಚೆರಿಯನ್, ದೀಪಕ್, ಫಕ್ಕಿರೇಶ್, ರಾಕೇಶ್,ಮಂಜುನಾಥ್ ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.


