
ಬಂಟ್ವಾಳ; ಮೊಗರನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಸನ್ನಿಧಿಯಲ್ಲಿ ವರ್ಷಾವಧಿ ಜರಗುವ ಲಕ್ಷದೀಪೋತ್ಸವವು ಇಂದು (ನವೆಂಬರ್ 21, ಶನಿವಾರ) ಬ್ರಹ್ಮಶ್ರೀ ನೀಲೇಶ್ವರ ವೇ| ಮೂ| ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಉತ್ಸವದ ಪ್ರಯುಕ್ತ ಪೂರ್ವಾಹ್ನ ಶುದ್ಧ ಕಲಶ, ಮಧ್ಯಾಹ್ನ ಮಹಾಪೂಜೆ ಜರಗಲಿದೆ. ಸಂಜೆ 6 ಗಂಟೆಗೆ ಸರಿಯಾಗಿ ದೀಪಾರಾಧನೆ, ಮಹಾಪೂಜೆ, ತಂತ್ರಬಲಿ ನಡೆದು, 6:30ಕ್ಕೆ ಶ್ರೀ ದೇವರ ಲಕ್ಷದೀಪೋತ್ಸವ ಸವಾರಿ ಹೊರಡಲಿದೆ. ಸವಾರಿಯು ಪಡ್ಡಾಯಿಬೈಲು, ನೆಟ್ಲ, ಕರಿಂಗಾಣ, ಅಮ್ಟೂರು, ಕೆ.ಸಿ. ರೋಡ್, ಕಲ್ಲಡ್ಕ, ಗೋಳ್ತಮಜಲು, ಮಾಣಿಮಜಲು ಹಾಗೂ ನಿಟಿಲಾಪುರ ಸೇರಿದಂತೆ ವಿವಿಧ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸಲಿದ್ದು, ರಾತ್ರಿ 10ರಿಂದ 11ರವರೆಗೆ ಕಲ್ಲಡ್ಕ ಮಹಿಷೇಖರ ಕಟ್ಟೆಯಲ್ಲಿ ಗುರ್ಜಿ ಉತ್ಸವ ನಡೆಯಲಿದೆ. ರಾತ್ರಿ 12 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಬಲಿ ಉತ್ಸವ ಜರಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಪ್ರಧಾನ ಅರ್ಚಕ ಎನ್. ನಾರಾಯಣ ರಾವ್ ಕಾರಂತ, ಅಧ್ಯಕ್ಷ ನವೀನ ಜಿ. ಗಟ್ಟಿ ನೆಟ್ಲ ಹಾಗೂ ಸದಸ್ಯರು ವಿನಂತಿಸಿದ್ದಾರೆ.


