
ಮಂಗಳೂರು: ನಗರದ ಹೊರವಲಯದ ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜು ಆವರಣದಿಂದ ವಿದ್ಯಾರ್ಥಿನಿಯೊಬ್ಬಳನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಪೋಷಕರು ಹಾಗೂ ಸಂಬಂಧಿಕರಿಂದಲೇ ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿನಿಯನ್ನು ಮಂಗಳೂರು ಪೊಲೀಸರು ಕೇರಳದಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಕೇರಳದ ಸಂಬಂಧಿಕರ ಮನೆಯಲ್ಲಿದ್ದ ಯುವತಿಯನ್ನು ರಕ್ಷಿಸಿ ಕರೆತಂದಿರುವ ಪೊಲೀಸರು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಈ ವೇಳೆ ಯುವತಿಯು ತಾನು ಕುಟುಂಬಸ್ಥರೊಂದಿಗೆ ತೆರಳಲು ಇಚ್ಛಿಸುವುದಿಲ್ಲ ಎಂದು ಪೊಲೀಸರಿಗೆ ಸ್ಪಷ್ಟಪಡಿಸಿದ್ದಾಳೆ.
ಘಟನೆಯ ಹಿನ್ನೆಲೆ: ಕಣಚೂರು ಮೆಡಿಕಲ್ ಕಾಲೇಜು ಆವರಣಕ್ಕೆ ಬಂದಿದ್ದ ಯುವತಿಯ ಕುಟುಂಬಸ್ಥರು ಹಾಗೂ ಹಲವು ವ್ಯಕ್ತಿಗಳು, ವಿದ್ಯಾರ್ಥಿನಿಯನ್ನು ಬಲವಂತವಾಗಿ ಎಳೆದೊಯ್ದು ಥಾರ್ ವಾಹನಕ್ಕೆ ಹತ್ತಿಸಿಕೊಂಡು ಪರಾರಿಯಾಗಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ನಡೆಸಿದ್ದ ಪೊಲೀಸರು, ಯುವತಿಯನ್ನು ಕೇರಳದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಆಯುಕ್ತರ ಮಾಹಿತಿ: ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ‘‘ಯುವತಿಯ ಹೇಳಿಕೆ ದಾಖಲಿಸಿಕೊಂಡ ಬಳಿಕ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಪರೀಕ್ಷೆ ಪೂರ್ಣಗೊಂಡ ನಂತರ ಆಕೆಯ ಇಚ್ಛೆಯಂತೆ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗುವುದು. ಅಗತ್ಯವಿದ್ದಲ್ಲಿ ಸಾಂತ್ವನ ಕೇಂದ್ರದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಆಶ್ರಯ ಕಲ್ಪಿಸಲಾಗುತ್ತದೆ’’ ಎಂದರು.
‘‘ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಠಾಣೆಗೆ ಕರೆತರಲಾಗಿದ್ದು, ಈ ಅಪರಾಧಕ್ಕೆ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ಇರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಅವರಿಗೆ ನೋಟಿಸ್ ನೀಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’’ ಎಂದು ಆಯುಕ್ತರು ತಿಳಿಸಿದ್ದಾರೆ.
ಇದು ಅಪಹರಣವಲ್ಲ ಎಂದ ಕಾಲೇಜು ಡೀನ್: ಮತ್ತೊಂದೆಡೆ, ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ಶಹನವಾಝ್ ಮಾಣಿಪ್ಪಾಡಿ, ‘‘ಕಾಲೇಜು ವಿದ್ಯಾರ್ಥಿನಿಯನ್ನು ಯಾರೋ ಅಪಹರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಆಕೆಯ ಪೋಷಕರೇ ಬಂದು ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ ಇದು ಅಪಹರಣವಲ್ಲ. ಪೋಷಕರು ಕರೆದೊಯ್ದ ತಕ್ಷಣವೇ ನಾವು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದೆವು’’ ಎಂದು ಸ್ಪಷ್ಟನೆ ನೀಡಿದ್ದಾರೆ.


