Saturday, November 21, 2026
Homeಕರಾವಳಿನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ ವ್ಯಕ್ತಿಗೆ 3 ತಿಂಗಳು ಜೈಲು, 5 ಸಾವಿರ ರೂ. ದಂಡ

ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ ವ್ಯಕ್ತಿಗೆ 3 ತಿಂಗಳು ಜೈಲು, 5 ಸಾವಿರ ರೂ. ದಂಡ

- Advertisement -
- Advertisement -

ಮಂಗಳೂರು: ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ತಪ್ಪು ಘೋಷಣಾ ಪತ್ರ ಸಲ್ಲಿಸಿದ ಆರೋಪಿಗೆ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯ 3 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.

ಆರೋಪಿ ಮುಹಮ್ಮದ್ ಇಸ್ಮಾಯೀಲ್ 2017ರ ಸೆಪ್ಟೆಂಬರ್ 8ರಂದು ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶಪಥ ಪತ್ರದೊಂದಿಗೆ ಘೋಷಣಾ ಪತ್ರ ಸಲ್ಲಿಸಿದ್ದ. ಈವರೆಗೆ ಯಾವುದೇ ನ್ಯಾಯಾಲಯದ ಪ್ರಕರಣದಲ್ಲಿ ಯಾವುದೇ ಆರೋಪಿಗೆ ಜಾಮೀನು ನೀಡಿಲ್ಲ ಎಂದು ಅದರಲ್ಲಿ ತಿಳಿಸಿದ್ದ.

ಆದರೆ, ಈ ಹಿಂದೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವೊಂದರ ಆರೋಪಿಗೆ ಇಸ್ಮಾಯೀಲ್ ಜಾಮೀನು ನೀಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿತ್ತು. ಹೀಗಾಗಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಆರೋಪದಡಿ ಭಾರತೀಯ ದಂಡ ಸಂಹಿತೆಯ ಕಲಂ 199ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಅದರಂತೆ ನ್ಯಾಯಾಲಯದ ಮುಖ್ಯ ಲಿಪಿಕಾಧಿಕಾರಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶಶಿಕಲಾ ಜಿ. ಅವರು ವಾದ-ಪ್ರತಿವಾದಗಳನ್ನು ಆಲಿಸಿ, ಆರೋಪಿಗೆ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಒಂದು ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಅಭಿಯೋಜಕಿ ಸುಮಂಗಲಾ ಚಂದ್ರಶೇಖರ ನಾಯ್ಕ ವಾದ ಮಂಡಿಸಿದ್ದರು.

- Advertisement -

Latest News

error: Content is protected !!