ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಗೆ ರಚಿಸಲಾಗಿರುವ ಎಸ್‍ಐಟಿಯ ವರದಿಯನ್ನು ರಾಜ್ಯ ಸರ್ಕಾರ ತಕ್ಷಣ ಬಹಿರಂಗ ಮಾಡಬೇಕು ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಸುನೀಲ್ ಕುಮಾರ್, ಎಸ್‍ಐಟಿ ರಚನೆ ಆಗಿ ಇಷ್ಟು ತಿಂಗಳು ಕಳೆದರೂ ವರದಿಯನ್ನು ಬಹಿರಂಗ ಮಾಡಿಲ್ಲ. ಹಾಗಾಗಿ ಈ ಪ್ರಕರಣದ ಹಿಂದೆ ಯಾರ ಕೈವಾಡ ಇದೆ ಎಂದು ರಾಜ್ಯವಸರ್ಕಾರ ತಿಳಿಸಲಿ ಎಂದು ಒತ್ತಾಯಿಸಿದ್ದಾರೆ.
ಹಿಂದೂ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳದ ಬಗ್ಗೆ ವಿನಾ ಕಾರಣ ಅವಹೇಳನ ಮಾಡಲಾಗುತ್ತಿದ್ದು, ಷಡ್ಯಂತ್ರ ರೂಪಿಸಿದ್ದ ಗ್ಯಾಂಗ್ ನ ಆರೋಪಿ ನ್ಯಾಯಾಲಯದ ಮುಂದೆ ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ ಎಂದು ಹೇಳಿರುವ ಶಾಸಕ ಸುನೀಲ್ ಕುಮಾರ್, ಆರೋಪಿ ಎಸ್‍ಐಟಿ ಮುಂದೆ ಹೇಳಲಾಗದ್ದನ್ನು ನ್ಯಾಯಾಲಯದ ಮುಂದೆ ಹೇಳಿದ್ದಾನೆಂದರೆ ಎಸ್‍ಐಟಿ ಯಾವ ರೀತಿಯ ತನಿಖೆ ಮಾಡಿತ್ತು. ಇದರ ಹಿಂದಿರುವ ಹುನ್ನಾರ ಏನು ಎಂಬುದು ಎಲ್ಲವೂ ಸಾರ್ವಜನಿಕ ಚರ್ಚೆಗೆ ಬರಬೇಕಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇವಲ ಹೆಸರಿನಲ್ಲಿ ಶಿವ ಅಂತ ಇಟ್ಟುಕೊಂಡರೆ ಆಗುವುದಿಲ್ಲ. ಧರ್ಮಸ್ಥಳದ ಬಗ್ಗೆ ಯಾರು ಅವಹೇಳನ ಮಾಡಿದ್ದಾರೋ ಅವರನ್ನು ರಾಜ್ಯ ಸರ್ಕಾರ ಒದ್ದು ಒಳಗೆ ಹಾಕಬೇಕಿತ್ತು ಎಂದೂ ಸುನೀಲ್ ಕುಮಾರ್ ಹೇಳಿದ್ದಾರೆ.


