
ಉಡುಪಿ ; ಮಲ್ಪೆ ನಿವಾಸಿ ಸಂದೀಪ್ ಸಾಲ್ಯಾನ್ ಅವರ ನಿಗೂಢ ಸಾವು ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್ ಸಿಕ್ಕಿದ್ದು, ಇದೊಂದು ವ್ಯವಸ್ಥಿತ ಕೊಲೆ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮಹಿಳೆಯನ್ನು ಕ್ಯಾಲಂಗುಟ್ ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಮೂಲತಃ ಮಂಗಳೂರಿನ ನಿವಾಸಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅಕ್ಷತಾ ಎಂದು ಗುರುತಿಸಲಾಗಿದೆ.

ಆರಂಭದಲ್ಲಿ ನಿಗೂಢ ಸಾವಿನಂತೆ ಕಂಡುಬಂದಿದ್ದ ಸಂದೀಪ್ ಸಾಲ್ಯಾನ್ ಪ್ರಕರಣವನ್ನು ತೀವ್ರ ತನಿಖೆಗೆ ಒಳಪಡಿಸಿದ ಪೊಲೀಸರಿಗೆ ಕೊಲೆಯ ಸುಳಿವು ಸಿಕ್ಕಿತ್ತು. ಆರೋಪಿ ಮಹಿಳೆ ಅಕ್ಷತಾ, ರೆಸಾರ್ಟ್ ರೂಂನಲ್ಲಿ ಸಂದೀಪ್ ಅವರನ್ನು ಕತ್ತನ್ನು ಕಟ್ಟರ್ ಬಳಸಿ ಕೊಯ್ದು ಕೊಲೆ ಮಾಡಿದ್ದಾಳೆ. ಬಳಿಕ ಅವರ ಬಳಿ ಇದ್ದ ಬೆಲೆಬಾಳುವ ಚಿನ್ನಾಭರಣಗಳು ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಳು. ಸಂದೀಪ್ ನಾಪತ್ತೆಯಾದ ಹಾಗೂ ಸಾವನ್ನಪ್ಪಿದ ಬಳಿಕ ತಲೆಮರೆಸಿಕೊಂಡಿದ್ದ ಅಕ್ಷತಾಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಕ್ಯಾಲಂಗುಟ್ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ? ಅಥವಾ ಈ ಕೃತ್ಯಕ್ಕೆ ನಿಖರವಾದ ಕಾರಣ ಏನು? ಎಂಬ ಸಂಪೂರ್ಣ ಸತ್ಯಾಂಶ ಪೊಲೀಸ್ ವಿಚಾರಣೆಯಿಂದ ಇನ್ನಷ್ಟೇ ಹೊರಬರಬೇಕಿದೆ


