
ಕೇರಳ: ದಿನ ಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಖರ್ಚು ಹೆಚ್ಚಿಸುವ, ದುಬಾರಿ ಲೈಫ್‌ಸ್ಟೈಲ್ ಬಿಂಬಿಸುವ ವೆಡ್ಡಿಂಗ್ ವಿಡಿಯೋಗಳೇ ವೈರಲ್ ಆಗುತ್ತಿರುತ್ತವೆ. ಆದರೆ, ಈ ಎಲ್ಲ ಆಡಂಬರಗಳ ನಡುವೆ ಕೇರಳದ ಯುವತಿಯೊಬ್ಬಳ ಮದುವೆ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಒಂದು ಗ್ರಾಂ ಚಿನ್ನದ ಆಭರಣವೂ ಇಲ್ಲದೆ, ಕೇವಲ ನೈಸರ್ಗಿಕ ಸೌಂದರ್ಯದೊಂದಿಗೆ ಹಸೆಮಣೆ ಏರಿದ ನವವಧುವಿನ ನಡೆಗೆ ಈಗ ಇಡೀ ದೇಶವೇ ಸಲಾಂ ಎನ್ನುತ್ತಿದೆ.
ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಸದ್ಯ ಕೇರಳದ ಈ ಮದುವೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮದುವೆ ದಿನದಂದು ಯುವತಿಯೊಬ್ಬಳು ಚಿನ್ನದ ಆಭರಣ ಬಿಡಿ, ಕನಿಷ್ಠ ಪಕ್ಷ ಯಾವುದೇ ಕೃತಕ ಒಡವೆಯನ್ನೂ ಧರಿಸಿಲ್ಲ! ಸುಂದರವಾದ ಕೆಂಪು ಬಣ್ಣದ ಸೀರೆ, ಗ್ರಾಂಡ್ ವರ್ಕ್ ಇರುವ ರೆಡ್ ಬ್ಲೌಸ್ ಮತ್ತು ಕೆಂಬಣ್ಣದ ದುಪಟ್ಟಾವನ್ನು ಧರಿಸಿ ಕಂಗೊಳಿಸುತ್ತಿದ್ದ ವಧು, ಆಭರಣಗಳಿಲ್ಲದೆಯೂ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದರು.
ಅಚ್ಚರಿಯ ವಿಷಯವೆಂದರೆ, ಆಕೆ ಕುತ್ತಿಗೆಗೆ ಹಾರವಾಗಲಿ, ಕೈಗೆ ಬಳೆಯಾಗಲಿ ಅಥವಾ ಕಿವಿಗೆ ಒಂದು ಸಣ್ಣ ಕಿವಿಯೋಲೆಯನ್ನು ಸಹ ಧರಿಸಿರಲಿಲ್ಲ. ಕೇವಲ ಚಂದದ ಕೇಶವಿನ್ಯಾಸ ಮತ್ತು ಆಕರ್ಷಕ ಮೇಕಪ್‌ನೊಂದಿಗೆ ಸರಳತೆಯೇ ಹೆಣ್ಣಿಗೆ ನಿಜವಾದ ಒಡವೆ ಎಂಬುದನ್ನು ಆಕೆ ಸಾಬೀತುಪಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಇಂದಿನ ಯುವ ತಲೆಮಾರು ಅಂದರೆ ‘ಜೆನ್ ಝಿ’ ಮಂದಿ ಈ ವಿವಾಹ ಶೈಲಿಗೆ ಸಂಪೂರ್ಣವಾಗಿ ಫಿದಾ ಆಗಿದ್ದಾರೆ.”ಇಂದಿನ ದಿನಗಳಲ್ಲಿ ನಾವೆಲ್ಲರೂ ನೋಡಿ ಕಲಿಯಬೇಕಾದ, ನಿಜವಾಗಿಯೂ ಟ್ರೆಂಡ್ ಮಾಡಬೇಕಾದ ಅತ್ಯುತ್ತಮ ಕಂಟೆಂಟ್ ಇದು. ಆಡಂಬರ ಪ್ರಿಯರ ಕಣ್ಣು ತೆರೆಸುವಂತಿದೆ,” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಚಿನ್ನದ ಬೆಲೆಯ ನಡುವೆ, ಇಂತಹದೊಂದು ದಿಟ್ಟ ನಿರ್ಧಾರ ಇಡೀ ಸಮಾಜಕ್ಕೆ ಮಾದರಿ ಎಂದು ಹಿರಿಯರೂ ಸಹ ಶ್ಲಾಘಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ, ಮಗಳ ಈ ಪ್ರಗತಿಪರ ಆಲೋಚನೆಗೆ ಬೆಂಬಲ ನೀಡಿದ ಪೋಷಕರು ಮತ್ತು ಆಭರಣಗಳಿಲ್ಲದ ವಧುವನ್ನು ಹೆಮ್ಮೆಯಿಂದ ಬರಮಾಡಿಕೊಂಡ ವರ ಹಾಗೂ ಆತನ ಕುಟುಂಬದವರಿಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಸದ್ಯ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಭಾರತೀಯ ಮದುವೆಗಳ ಇತಿಹಾಸದಲ್ಲಿ ಹೊಸದೊಂದು ಸರಳತೆಯ ಟ್ರೆಂಡ್‌ಗೆ ನಾಂದಿ ಹಾಡಿದೆ.


