
ಸುಳ್ಯ: ನಗರದ ಸರ್ಕಾರಿ ಆಸ್ಪತ್ರೆಯ ಹಿಂಬದಿ ರಸ್ತೆಯ ಮಧ್ಯದಲ್ಲೇ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ರಸ್ತೆಯ ವಿದ್ಯುತ್ ಕಂಬಗಳನ್ನು ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (MESCOM) ಅಧಿಕಾರಿಗಳು ಕೊನೆಗೂ ತೆರವುಗೊಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ಮೆಸ್ಕಾಂ, ಕಂಬಗಳನ್ನು ರಸ್ತೆ ಮಧ್ಯದಿಂದ ಪಕ್ಕಕ್ಕೆ ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿದ್ದ ಲೇಔಟ್ ಮಾಲೀಕರು, ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬವನ್ನು ರಸ್ತೆಯ ಒಳಗೊಳ್ಳುವಂತೆ ಮಾಡಿಕೊಂಡೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ. ರಸ್ತೆಯ ಮಧ್ಯದಲ್ಲೇ ವಿದ್ಯುತ್ ಕಂಬ ಇದ್ದಿದ್ದರಿಂದ ಸ್ಥಳೀಯ ಸಾರ್ವಜನಿಕರ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ರಾತ್ರಿ ವೇಳೆಯಲ್ಲಂತೂ ಇದು ಭಾರಿ ಅಪಘಾತಕ್ಕೆ ಆಹ್ವಾನ ನೀಡುವಂತಿತ್ತು.ಈ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಸಾಮಾಜಿಕ ಜಾಲತಾಣಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಆಕ್ಷೇಪಗಳು ವ್ಯಕ್ತವಾಗಿದ್ದವು.
ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಾರ್ವಜನಿಕರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಮೆಸ್ಕಾಂ ಸುಳ್ಯ ವಿಭಾಗದ ಅಧಿಕಾರಿಗಳು, ಕಾಂಕ್ರೀಟ್ ರಸ್ತೆಯ ಮಧ್ಯದಲ್ಲಿದ್ದ ವಿದ್ಯುತ್ ಕಂಬಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ.ಲೇಔಟ್‌ನ ದೊಡ್ಡ ವಿದ್ಯುತ್ ಕಂಬವನ್ನು ರಸ್ತೆಯ ಬದಿಗೆ ಸುರಕ್ಷಿತವಾಗಿ ಶಿಫ್ಟ್ ಮಾಡಲಾಗಿದ್ದು, ಈಗ ವಾಹನ ಸವಾರರು ಯಾವುದೇ ಆತಂಕವಿಲ್ಲದೆ ನಿರಾಳವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೆಸ್ಕಾಂ ಅಧಿಕಾರಿಗಳ ಈ ತಕ್ಷಣದ ಕ್ರಮಕ್ಕೆ ಸ್ಥಳೀಯರು ಸದ್ಯ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


