ನವದೆಹಲಿ: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನವದೆಹಲಿಯಲ್ಲಿ ಇಂದು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಸೌಜನ್ಯದ ಭೇಟಿ ಮಾಡಿ ಸಮಾಲೋಚನೆ ನಡೆಸಿದ ಡಿ.ಕೆ. ಶಿವಕುಮಾರ್, ಉಪರಾಷ್ಟ್ರಪತಿಗಳ ನಿವಾಸದಲ್ಲಿ ಸಿ.ಪಿ. ರಾಧಾಕೃಷ್ಣನ್ ಅವರನ್ನೂ ಭೇಟಿ ಮಾಡಿದ್ದಾರೆ.
ಇದಾದ ಬಳಿಕ ಕರ್ನಾಟಕ ಸರಕಾರದ ಬೇಡಿಕೆಗಳ ಕುರಿತು ಕೇಂದ್ರ ಜಲ ಶಕ್ತಿ ಇಲಾಖೆ ಸಚಿವ ಸಿ.ಆರ್. ಪಾಟೀಲ್ ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿ ಬೇಡಿಕೆ ಪತ್ರ ಸಲ್ಲಿಸಿ, ಸಮಾಲೋಚನೆ ನಡೆಸಿದರು.
ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಮತ್ತು ಮಹದಾಯಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನ ನೀಡುವಂತೆ ಡಿ.ಕೆ. ಶಿವಕುಮಾರ್ ಜಲಶಕ್ತಿ ಸಚಿವರನ್ನು ಮನವಿ ಮಾಡಿದ್ದಾರೆ.
ಅಲ್ಲದೇ, ಏತ ನೀರಾವರಿ, ಕಾಲುವೆ ಕಾಮಗಾರಿಗಳಿಗೆ ಎಐಬಿಪಿ-ಪಿಎಂಕೆಎಸ್ ವೈ ಮತ್ತು ಎಫ್ಎಂಬಿಎಪಿ ಯೋಜನೆಗಳಡಿ ಕೇಂದ್ರದ ನೆರವು ಕೋರಿರುವ ಸಿಎಂ, ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ನ್ಯಾಯಯುತ ಪಾಲು ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ.
ಜಲ ಸಂಪನ್ಮೂಲ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


